ಶುದ್ಧ ಕುಡಿವ ನೀರು ಒದಗಿಸಿ; ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಒತ್ತಾಯ

08112022 devadurga formars insist
Published on

ದೇವದುರ್ಗ: ಭೂಮನಗುಂಡ ಗ್ರಾಮದ ಜನರಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಗ್ರೇಡ್ 2 ತಹಸೀಲ್ದಾರ್ ಗೋವಿಂದ್‌ಗೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಗ್ರಾಮದಲ್ಲಿ ಕಲುಷಿತ ಕುಡಿವ ನೀರಿನ ಸಮಸ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ನೀರು ತುಂಬಿಟ್ಟರೆ ಪೊರೆ ಬರುತ್ತದೆ. ಇದೇ ನೀರನ್ನು ಗ್ರಾಮಸ್ಥರು ಕುಡಿಯಲು, ಅಡುಗೆ ಮಾಡಲು ಹಾಗೂ ಗೃಹೋಪಯೋಗಕ್ಕೆ ಬಳಸುತ್ತಿದ್ದಾರೆ. ಇದರಿಂದ ಮೈ ಕೈ, ಕೀಲು, ಹೊಟ್ಟೆ ಬೇನೆ ಸೇರಿ ಇತರ ಸಮಸ್ಯೆಗಳು ಕಾಡುತ್ತಿವೆ.

ಗ್ರಾಮದ ಸಮಸ್ಯೆಗಳ ಬಗ್ಗೆ ಕೆಲ ದಿನಗಳ ಹಿಂದೆ ಸ್ಥಳೀಯ ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿದರೂ ಹಾರಿಕೆ ಉತ್ತರ ನೀಡಿ ಕೈತೊಳೆದುಕೊಂಡಿದ್ದು, ಈವರೆಗೆ ಪರಿಹಾರ ಕಲ್ಪಿಸಿಲ್ಲ. ಅಶುದ್ಧ ನೀರು ಕುಡಿದು ಮಕ್ಕಳು ಹಾಗೂ ವೃದ್ಧರಲ್ಲಿ ನಾನಾ ರೋಗಗಳು ಬರುತ್ತಿವೆ. ಇದರಿಂದ ಗ್ರಾಮಸ್ಥರು ಆಸ್ಪತ್ರೆಗೆ ಅಲೆಯುವಂತಾಗಿದೆ ಎಂದು ದೂರಿದರು.

ಕೂಡಲೇ ಹೊಸಬೋರ್‌ವೆಲ್ ಕೊರೆದು ಶುದ್ಧ ಕುಡಿವ ನೀರು ಪೂರೈಕೆ ಮಾಡಬೇಕು. ಹಲವು ದಿನಗಳಿಂದ ಬಂದ್ ಆಗಿರುವ ಶುದ್ಧ ಕುಡಿವ ನೀರಿನ ಘಟಕ ಆರಂಭಿಸಬೇಕು. ಈಗ ಸರಬರಾಜು ಆಗುತ್ತಿರುವ ನೀರಿನ ಪರೀಕ್ಷೆ ಮಾಡಿಸಬೇಕು. ನೀರಿನ ಟ್ಯಾಂಕ್ ಅನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಶುದ್ಧನೀರು ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಹನುಮಯ್ಯ ಮುಂಡೆ, ಈರಣ್ಣ ಕಮಲದಿನ್ನಿ, ಚನ್ನಬಸವ ಮುಂಡೆ, ಬಸವರಾಜ ಮುಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net