

ದೇವದುರ್ಗ: ಸರ್ಕಾರ ಹಾಗೂ ಸ್ಥಳೀಯ ಆಡಳಿತ ಜನರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಹಾಗೂ ಅಭಿವೃದ್ಧಿ ಕೆಲಸ ಮಾಡಲು ನಿಗದಿತ ಸಮಯದಲ್ಲಿ ಜನರು ತೆರಿಗೆ ಪಾವತಿಸಬೇಕು ಎಂದು ತಾಪಂ ಇಒ ಬಸವರಾಜ ಹಟ್ಟಿ ಹೇಳಿದರು.
ತಾಲೂಕಿನ ಚಿಂಚೋಡಿ ಗ್ರಾಪಂ ವ್ಯಾಪ್ತಿಯ ಬುಂಕಲದೊಡ್ಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ತಾಪಂ, ಗ್ರಾಪಂಯಿಂದ ಆಯೋಜಿಸಿದ್ದ ವಿಶೇಷ ತೆರಿಗೆ ಅಭಿಯಾನಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು.
ಜನರಿಗೆ ಅಗತ್ಯ ಸೌಲಭ್ಯಗಳಾದ ಕುಡಿವ ನೀರು, ಸಿಸಿ ರಸ್ತೆ ಚರಂಡಿ ನಿರ್ಮಾಣ, ಬೀದಿದೀಪ, ಉತ್ತಮ ರಸ್ತೆ ನಿರ್ಮಾಣ ಸ್ಥಳೀಯ ಆಡಳಿತದ ಕೆಲಸ. ಈ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ತೆರಿಗೆ ವಸೂಲಿ ಅಭಿಯಾನ ರಾಜ್ಯಾದ್ಯಂತ ಕೈಗೊಳ್ಳಲಾಗುತ್ತಿದೆ ಎಂದರು.
ಪಂಚಾಯತ್ ರಾಜ್ ಇಲಾಖೆ ಸಹಾಯಕ ನಿರ್ದೇಶಕಿ ಮಹೇಶ್ವರಿ ಮಾತನಾಡಿ, ಸರ್ಕಾರದ ಸೂಚನೆಯಂತೆ ಡಿ.5ರಿಂದ ವಿಶೇಷ ತೆರಿಗೆ ಅಭಿಯಾನ ನಡೆಸಲಾಗುತ್ತಿದೆ. ಜನರ ಮನೆಬಾಗಿಲಿಗೆ ಹೋಗಿ ಅರಿವು ಮೂಡಿಸಲಾಗುವುದು ಎಂದರು. ಪಿಡಿಒ ತಿರುಮಲ ರೆಡ್ಡಿ, ಮಂಜುನಾಥ, ಮುಬಾಶೀರ್, ಅಂಜನೇಯ, ವೀರೇಶ, ಶಿವರಾಜ ಇತರರಿದ್ದರು.