

ದೇವದುರ್ಗ: ಸಂಘಟನೆಗಳು ಜಾತಿಗೆ ಸೀಮಿತವಾಗದೆ ಸಾಮಾಜಿಕ ಕಳಕಳಿ ಮೈಗೂಡಿಸಿಕೊಂಡು ಸಮಾಜ ಕಟ್ಟುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಇಂಥ ಕಾರ್ಯದಲ್ಲಿ ಹೇಮರಡ್ಡಿ ಮಲ್ಲಮ್ಮ ಯುವ ಘಟಕ ತೊಡಗಿಸಿಕೊಳ್ಳಲಿದೆ ಎಂದು ಬಿಜೆಪಿ ರೈತ ಮೋರ್ಚಾ ಮಂಡಲ ಅಧ್ಯಕ್ಷ ಸಂಜೀವ್‌ರೆಡ್ಡಿ ಸಾಹುಕಾರ ಹೇಳಿದರು.
ತಾಲೂಕಿನ ಕಕ್ಕಲದೊಡ್ಡಿ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಯುವ ಘಟಕ ಸೋಮವಾರ ಆಯೋಜಿಸಿದ್ದ ಸಭೆ, ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಒಂದು ಜಾತಿಗೆ ಸೀಮಿತವಲ್ಲ. ಜಗತ್ತಿನ ಒಳಿತಿಗಾಗಿ, ಸ್ವಸ್ಥ ಸಮಾಜಕ್ಕೆ ಶ್ರಮಿಸಿದ್ದು, ಅವರ ಆದರ್ಶಗಳು ಎಲ್ಲರಿಗೂ ಮಾದರಿ ಎಂದರು.
ಹೇಮರಡ್ಡಿ ಮಲ್ಲಮ್ಮ ಯುವ ಪಡೆ ವಿವಿಧ ಸಮಾಜಮುಖಿ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಪರಿಸರ ಜಾಗೃತಿ, ಶಾಲಾ ಕಾಲೇಜು ಅಭಿವೃದ್ಧಿಗೆ ಸಹಕಾರ, ರೈತರಿಗೆ ಅರಿವು ಮೂಡಿಸುವುದು, ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವ ಜತೆಗೆ ಮಾಹಿತಿ ನೀಡಬೇಕು. ನಾಡು, ನುಡಿ, ರಾಷ್ಟ್ರ ಭಕ್ತಿ ಬೆಳೆಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.
ಗಾಣಧಾಳ ಗ್ರಾಪಂ ಅಧ್ಯಕ್ಷ ಶಿವನಗೌಡ ದೇಸಾಯಿ, ಪ್ರಮುಖರಾದ ವೆಂಕಟರಾಯ ಬೆನಕನ್, ಮಲ್ಲಿಕಾರ್ಜುನ, ಮಲ್ಲನಗೌಡ, ಡಾ.ನಾಗರಾಜ, ಮಲ್ಲನಗೌಡ ಗೆಜ್ಜಬಾವಿ ವಕೀಲ, ಮಹಾದೇವ ಪಾಟೀಲ್ ಮೂಲಿಮನಿ, ಶಿವನಗೌಡ ಪೊ.ಪಾ, ಸಿದ್ದಲಿಂಗರೆಡ್ಡಿ ಜೇರಬಂಡಿ, ಶರಣಗೌಡ ಕಮದಾಳ, ಹನುಮರೆಡ್ಡಿ ವಜ್ಜಲ್ ಇತರರಿದ್ದರು.