

ದೇವದುರ್ಗ: ಪಟ್ಟಣದ ಪುರಸಭೆ ವ್ಯಾಪ್ತಿಯ ಐತಿಹಾಸಿಕ ಚಂದಗಿರಿಯ ಆದಿ ಭೈರವಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಜಾನುವಾರ ಜಾತ್ರೆ ಜ.15ರಂದು ಜರುಗಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶಿವರಾಜ ಪೂಜಾರಿ ತಾತ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಶಿಖರಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಆದೆಪ್ಪ ತಾತ, ರಂಗನಾಥ ಪೂಜಾರಿ ತಾತನವರು ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ. ಜಾತ್ರೆ ನಿಮಿತ್ತ ಜ.14ರಂದು ಪಟ್ಟಣದಿಂದ ಕೃಷ್ಣಾನದಿದಂಡೆಯ ಅಣೆಮಲ್ಲೇಶ್ವರ ದೇವಸ್ಥಾನದಲ್ಲಿ ಗಂಗಾಸ್ಥಾನ ಪೂಜೆ ನೆರವೇರಲಿದೆ. 15 ರಂದು ಬೆಳಗ್ಗೆ 8ಕ್ಕೆ ಪಲ್ಲಕ್ಕಿ ಸೇವೆ, ನಂತರ ಸ್ವಾಮೀಜಿಗಳ ಹೇಳಿಕೆ ಕಾರ್ಯಕ್ರಮ ನಡೆಯಲಿದೆ. ಸಂಜೆ 4ಗಂಟೆಗೆ ರಥೋತ್ಸವ ಜರುಗಲಿದೆ ಎಂದು ಮಾಹಿತಿ ನೀಡಿದರು.
ಜ.16ರಂದು ಬೆಳಗ್ಗೆ ರುದ್ರ, ನವಗ್ರಹ ಹೋಮ ಪೂಜೆ ನೆರವೇರಲಿದೆ. ಸರಪಳಿ ಹರಿಯುವುದು, ಉಸುಕಿನ ಚೀಲ ಎತ್ತುವ ಸ್ಪರ್ಧೆ ನಡೆಯಲಿದೆ. ಪ್ರಥಮ ಸ್ಥಾನ ಪಡೆದವರಿಗೆ 5 ತೊಲ ಬೆಳ್ಳಿ ಕಡಗ ನೀಡಲಾಗುವುದು. ಜಾತ್ರಾ ಮಹೋತ್ಸವ ನಿಮಿತ್ತ ಜಾನುವಾರ ಜಾತ್ರೆ ನಡೆಯಲಿದ್ದು, ಅತಿಹೆಚ್ಚು ಬೆಲೆಗೆ ಮಾರಾಟವಾದ ಜಾನುವಾರ ಮಾಲೀಕರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸದರು. ಪ್ರಮುಖರಾದ ಬಸವರಾಜ ನಾಯಕ, ಟಿ.ಜಯರಾಜ ಮಡಿವಾಳ, ಬಸವರಾಜ ಮಡಿವಾಳ, ವೆಂಕಟೇಶ ನಾಯಕ ಚಿಂತಲಕುಂಟಿ, ಶಿವರಾಜ ರುದ್ರಾಕ್ಷಿ, ಮಲ್ಲಿಕಾರ್ಜುನ ಮಡಿವಾಳ, ರಾಮಣ್ಣ ನಾಯಕ ಡಿ.ಕರಡಿಗುಡ್ಡ ಇತರರಿದ್ದರು.