ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ಖಂಡಿಸಿ ಪ್ರತಿಭಟನೆ

Devadurga banajiga Community Appeal
ಬಣಜಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಜಯಪುರ ಶಾಸಕ ಬಸವನಗೌಡ ಯತ್ನಾಳ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸಿ ದೇವದುರ್ಗದಲ್ಲಿ ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪಲ್‌ಗೆ ಬಣಜಿಗ ಸಮುದಾಯ ಕ್ಷೇಮಾಭಿವೃದ್ಧಿ ಸಂಘ ಗುರುವಾರ ಮನವಿ ಸಲ್ಲಿಸಿತು.
Published on

ದೇವದುರ್ಗ: ಬಣಜಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಇಲ್ಲಿನ ಮಿನಿವಿಧಾನಸೌಧ ಮುಂದೆ ಬಣಜಿಗ ಸಮುದಾಯ ಕ್ಷೇಮಾಭಿವೃದ್ಧಿ ಸಂಘ ಗುರುವಾರ ಪ್ರತಿಭಟನೆ ನಡೆಸಿತು.

ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪಲ್‌ಗೆ ಮನವಿ ಸಲ್ಲಿಸಿತು. ಬಣಜಿಗ ಸಮುದಾಯ ರಾಜ್ಯದಲ್ಲಿ ತನ್ನದೇ ಆದ ಭವ್ಯ ಪರಂಪರೆ, ಇತಿಹಾಸ ಹೊಂದಿದ್ದು, ಸಮುದಾಯಕ್ಕೆ ವಿಶೇಷ ಕೊಡುಗೆ ನೀಡಿದೆ. ಪ್ರೀತಿ, ವಿಶ್ವಾಸದ ಪ್ರತೀಕವಾಗಿರುವ ಬಣಜಿಗ ಸಮುದಾಯ ಶಿವಶರಣೆ ಅಕ್ಕಮಹಾದೇವಿ ಸೇರಿ ಇತರ ಶರಣರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಆದರೆ, ಇಂಥ ಸಮುದಾಯದ ವಿರುದ್ಧ ವಿಜಯಪುರ ಶಾಸಕ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಪಂಚಮಸಾಲಿ ಸಮುದಾಯಕ್ಕೆ ಮೀಸಲು ಸೌಲಭ್ಯ ಕಲ್ಪಿಸಲು ನಡೆಯುತ್ತಿದ್ದ ಹೋರಾಟದಲ್ಲಿ ಭಾಗವಹಿಸಿದ ಬಸವರಾಜ ಪಾಟೀಲ್ ಯತ್ನಾಳ, ತಮ್ಮ ಸಮುದಾಯವನ್ನು ಓಲೈಸುವ ದೃಷ್ಟಿಯಿಂದ ಇನ್ನೊಂದು ಸಮುದಾಯ ವಿರುದ್ಧ ಕೆಟ್ಟ ಪದ ಬಳಸಿರುವುದು ಸಮಾಜದಲ್ಲಿ ಶಾಂತಿ ಕದಡುವ ಕೃತ್ಯವಾಗಿದೆ ಎಂದು ಆರೋಪಿಸಿ, ಅವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂಘದ ಸದಸ್ಯರಾದ ವಿ.ಬಸವರಾಜ, ಸುರೇಶ ಪಾಟೀಲ್, ಶರಣಪ್ಪ ಬಳೆ, ಶಿವರಾಜಪ್ಪ, ಸತೀಶ ಶೆಟ್ಟಿ, ಬಸವೇಶ ಹುಗ್ಗಿ, ಶರಣಪ್ಪ ಕೋರಿ, ಶರಣಬಸವ ರಾಮದುರ್ಗ, ಸಂಗಮೇಶ ಹರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net