ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ

29-DVD-2
Published on

ದೇವದುರ್ಗ:ಬಡವರು, ದಲಿತರು ಹಲವು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದು, ಅವರಿಗೆ ಹಕ್ಕುಪತ್ರ ನೀಡದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್ ಹೇಳಿದರು.

ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಹಾಗೂ ನಿವೇಶನ ರಹಿತರಿಗೆ ಜಾಗ ನೀಡುವಂತೆ ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧವರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಮಂಗಳವಾರ ನಡೆಸಿದ ಬೃಹತ್ ಪ್ರತಿಭಟನಾ ರ‌್ಯಾಲಿಯಲ್ಲಿ ಮಾತರನಾಡಿದರು.

ಹಕ್ಕುಪತ್ರ ನೀಡುವಂತೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದರೂ ಸರ್ಕಾರ ಸ್ಪಂದಿಸುತ್ತಿಲ್ಲ. ತುಂಡುಭೂಮಿಯನ್ನೇ ನಂಬಿ ಬಡವರು ಜೀವನ ನಡೆಸುತ್ತಿದ್ದಾರೆ.ಹಕ್ಕುಪತ್ರ ಇಲ್ಲದೆ ಜೀವನಕ್ಕೆ ಭದ್ರತೆ ಇಲ್ಲದಂತಾಗಿದೆ. ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿದರೂ ಆಡಳಿತ ನಡೆಸಿದ ಎಲ್ಲ ಸರ್ಕಾರಗಳೂ ವಿಳಂಬ ನೀತಿ ಅನುಸರಿಸುತ್ತಿವೆ ಎಂದು ದೂರಿದರು.

ಕೂಡಲೇ ಅರ್ಜಿ ನಮೂನೆ 50, 53 ಹಾಗೂ 57 ಸಲ್ಲಿಸಿದ ಫಲಾನುಭವಿ ಮತ್ತು ಸರ್ಕಾರಿ ಜಾಗದಲ್ಲಿ ವಾಸವಿರುವ ಬಡವರಿಗೆ 94ಸಿ ಹಾಗೂ 94ಸಿಸಿ ಅಡಿ ಅಕ್ರಮ ಸಕ್ರಮದಡಿ ಹಕ್ಕುಪತ್ರ ನೀಡಬೇಕು. ನಿವೇಶನ ರಹಿತ ಬಡವರಿಗೆ ನಿವೇಶನದ ಜತೆಗೆ ಮನೆ ಮಂಜೂರು ಮಾಡಬೇಕು. ಗುಡಿಸಲಲ್ಲಿ ವಾಸವಿರುವ ಬಡವರು ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ. ಸಹಾಯಧನ ನೀಡಬೇಕು. ಸುವರ್ಣ ಗ್ರಾಮದಡಿ ಆಯ್ಕೆಯಾದ ಗ್ರಾಮಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್, ಪ್ರಮುಖರಾದ ಎಚ್.ಎ.ಹಟ್ಟಿ, ಹೈದರ್ ಅಲಿ, ಬೂದೆಪ್ಪ ಮ್ಯಾತ್ರಿ, ಭೀಮಣ್ಣ ವೀರಗೋಟ, ನಾಗರಾಜ ಭೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net