

ದೇವದುರ್ಗ: ಆಟೋ ಚಾಲಕರು ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ. ಜನರ ಸೇವೆಗಾಗಿ ಜೀವನ ಮುಡುಪಾಗಿಟ್ಟಿದ್ದಾರೆ. ಡ್ರೈವರ್‌ಗಳು ದುಶ್ಚಟಗಳಿಂದ ದೂರವಿದ್ದು, ಕುಟುಂಬದ ಜತೆ ಉತ್ತಮ ಬದುಕು ಸಾಗಿಸಲಿ ಎಂದು ಎಚ್‌ಜೆಡ್‌ಪಿ ದರ್ಗಾದ ಹಜರತ್ ಜಹೀರುದ್ದೀನ್ ಪಾಷಾ ತಾತ ಸಲಹೆ ನೀಡಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ದಿ.ಶಂಕರನಾಗ್ ಹಾಗೂ ಮುರಿಗೆಪ್ಪ ಖೇಣೇದ್ ಎರಡು ಆಟೋ ಸ್ಟ್ಯಾಂಡ್ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಆಟೋ ಚಾಲಕರನ್ನು ಪ್ರಯಾಣಿಕರು ಮನೆಯ ಸದಸ್ಯರೆಂದು ನಂಬಿಕೊಂಡಿದ್ದಾರೆ. ಅವರ ನಂಬಿಕೆಗೆ ತಕ್ಕಂತೆ ಚಾಲಕರು ವೃತ್ತಿ ಬದ್ಧತೆ ಉಳಿಸಿಕೊಂಡಿದ್ದಾರೆ. ಪ್ರಯಾಣಿಕರು ಆಟೋದಲ್ಲಿ ಬಿಟ್ಟುಹೋಗುವ ಅಮೂಲ್ಯ ವಸ್ತುಗಳನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ ಎಂದರು.
ಭೂ ದಾನಿ ಪ್ರಕಾಶ ಖೇಣೇದ್ ಮಾತನಾಡಿ, ಆಟೋ ಚಾಲಕರು ಶ್ರಮಜೀವಿಗಳಾಗಿದ್ದಾರೆ. ಅವರಿಗಾಗಿ ಸ್ಟ್ಯಾಂಡ್ ತೆರೆಯಲು ಅವಕಾಶ ನೀಡಲಾಗಿದೆ. ಚಾಲಕರು ಕಡ್ಡಾಯವಾಗಿ ಜೀವವಿಮೆ ಮಾಡಿಸಬೇಕು. ಸಂಚಾರ ನಿಯಮ ಪಾಲನೆ ಮಾಡುವ ಮೂಲಕ ಅಪಘಾತ ಪ್ರಮಾಣ ಶೂನ್ಯಕ್ಕೆ ಇಳಿಸುವ ಸತ್ಕಾರ್ಯ ಮಾಡಬೇಕು. ಆಟೋ ಚಾಲಕರಿಗೆ ಜನರು ಗೌರವ ನೀಡಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ಉದ್ಯಮಿ ನಿಖಿಲ್ ಖೇಣೇದ್, ಶಂಕರನಾಗ್ ಆಚೋ ಚಾಲಕರ ಸಂಘದ ತಾಲೂಕಾಧ್ಯಕ್ಷ ರಫಿ, ಮುಖಂಡರಾದ ಸುಖಮುನಿ ರೆಡ್ಡಿ, ವೆಂಕಟೇಶ, ಉಸ್ಮಾನ್‌ಸಾಬ್, ಶಫಿ, ಹನುಮಯ್ಯ ನಾಯಕ, ಯಂಕಪ್ಪ ದೊರೆ, ಮಾಯಪ್ಪ ನಾಯಕ, ರಫಿ, ಮುದ್ದುರಂಗಪ್ಪ ಇತರರಿದ್ದರು.