

ದೇವದುರ್ಗ: ಆಲ್ಕೋಡ್ ಗ್ರಾಮದ ಪಶು ಚಿಕಿತ್ಸಾ ಕೇಂದ್ರಕ್ಕೆ ವೈದ್ಯರನ್ನು ನೇಮಕ ಮಾಡುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ನೌಕರ ಬಸವರಾಜಗೆ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.
ಆಲ್ಕೋಡ್ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಐದು ವಿವಿಧ ಹುದ್ದೆಗಳು ಖಾಲಿಯಿವೆ. ಮುಖ್ಯ ಪಶು ವೈದ್ಯಾಧಿಕಾರಿ ಹುದ್ದೆ ಖಾಲಿಯಿರುವುದರಿಂದ ಪಶುಗಳಿಗೆ ಚಿಕಿತ್ಸೆ ಸಿಗದೆ ರೈತರು ಸಮಸ್ಯೆ ಎದುರಿಸುವಂತಾಗಿದೆ. ದನ-ಕರುಗಳಿಗೆ ರೋಗ, ರುಜಿನ ಬಂದರೆ ಬೇರೆ ಊರುಗಳಿಂದ ವೈದ್ಯರನ್ನು ಕರೆಯಿಸಿ ಹೆಚ್ಚಿನ ಹಣ ಖರ್ಚು ಮಾಡಿ ಚಿಕಿತ್ಸೆ ಕೊಡಿಸಬೇಕಾಗಿದೆ. ಆಸ್ಪತ್ರೆಯಲ್ಲಿ ಪಶುಗಳಿಗೆ ಔಷಧ ಉಚಿತವಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದರು. ಚರ್ಮಗಂಟು ರೋಗ ತಡೆಗೆ ಎಲ್ಲ ದನಗಳಿಗೆ ರೋಗ ನಿರೋಧಕ ಲಸಿಕೆ ನೀಡಬೇಕು. ಪಶು ಚಿಕಿತ್ಸಾ ಕೇಂದ್ರಗಳಿಗೆ ಅಗತ್ಯ ಲಸಿಕೆ, ಔಷಧ ನೀಡಬೇಕು ಎಂದು ಆಗ್ರಹಿಸಿದರು.