

ಅಮರೇಶ ಚಿಲ್ಕರಾಗಿ
ದೇವದುರ್ಗ: ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದ ಒಳಹರಿವು ಹೆಚ್ಚಳವಾಗಿರುವುದು ಜಿಲ್ಲೆಯ ಲಿಂಗಸುಗೂರು ಮತ್ತು ದೇವದುರ್ಗ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.
ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಕ್ಕೆ ಎರಡ್ಮೂರು ದಿನಗಳಿಂದ ಒಳಹರಿವು ಹೆಚ್ಚಾಗಿದೆ. ಈ ಎರಡೂ ಜಲಾಶಯಗಳಲ್ಲಿ ಶೇ.70 ನೀರು ಸಂಗ್ರಹವಾಗಿದ್ದು, ಜುಲೈ ಕೊನೆಯ ವಾರದಲ್ಲಿ ನಾರಾಯಣಪುರ ಬಲದಂಡೆ ನಾಲೆಗೆ ನೀರು ಹರಿಸುವ ಬಗ್ಗೆ ರೈತರು ನಿರೀಕ್ಷೆ ಹೊಂದಿದ್ದಾರೆ.
ಕಳೆದ ವರ್ಷ ಬರದಿಂದಾಗಿ ಕೃಷ್ಣಾನದಿ ನೀರು ಆಶ್ರಿತ ರೈತರು ಸಮರ್ಪಕವಾಗಿ ಬೆಳೆ ಬೆಳೆದಿರಲಿಲ್ಲ. ಈ ವರ್ಷವೂ ನಿರೀಕ್ಷೆಯಂತೆ ಮಳೆಯಾಗದಿದ್ದರೂ ಮಹಾರಾಷ್ಟ್ರದಲ್ಲಿ ಮಳೆ ಸುರಿಯುತ್ತಿರುವ ಕಾರಣ ಜಲಾಶಯಗಳಿಗೆ ನೀರು ಹರಿದುಬರುತ್ತಿವೆ. ಆಲಮಟ್ಟಿ ಜಲಾಶಯಕ್ಕೆ 33,874 ಕ್ಯೂಸೆಕ್ ಒಳಹರಿವು ಇದ್ದು, ಕೃಷ್ಣಾನದಿಗೆ 3,500 ಕ್ಯೂಸೆಕ್ ಹರಿಬಿಡಲಾಗುತ್ತಿದೆ.
ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಗುರುವಾರ 3,296, ಬುಧವಾರ 1389 ಕ್ಯೂಸೆಕ್, ಅದಕ್ಕೂ ಮುನ್ನ ಎರಡ್ಮೂರು ದಿನ ಒಂದು ಸಾವಿರಕ್ಕೂ ಅಧಿಕ ಕ್ಯೂಸೆಕ್ ಒಳಹರಿವು ಇತ್ತು. ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಒಳಹರಿವು ಇರುವ ಕಾರಣ ಮುಂದಿನ ವಾರ ಕೃಷ್ಣಾ ಮೇಲ್ದಂಡೆ ಯೋಜನೆ ಸಲಹಾ ಸಮಿತಿ (ಐಸಿಸಿ) ಸಭೆ ಕರೆಯಲು ಕೆಬಿಜೆಎನ್‌ಎಲ್ ಅಧಿಕಾರಿಗಳು ಐಸಿಸಿ ಅಧ್ಯಕ್ಷ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರಗೆ ಪತ್ರ ಬರೆದಿದ್ದಾರೆ. ಜು.20ರೊಳಗೆ ಐಸಿಸಿ ಸಭೆ ನಡೆಯುವ ಸಾಧ್ಯತೆಯಿದ್ದು, ರೈತರ ಚಿತ್ತ ಐಸಿಸಿ ಸಭೆಯತ್ತ ನೆಟ್ಟಿದೆ.
ಜಲಾಶಯಕ್ಕೆ ಒಳಹರಿವು ಹೆಚ್ಚಾಗಿರುವುದರಿಂದ ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಭತ್ತದ ಸಸಿಮಡಿ ಹಾಕಿದ್ದು ಹೊಲ ಹದ ಮಾಡುತ್ತಿದ್ದಾರೆ. ಮೆಣಸಿನಕಾಯಿ, ಹತ್ತಿ ಬಿತ್ತನೆ ಕ್ಷೇತ್ರ ಹೆಚ್ಚಾಗುವ ಸಾಧ್ಯತೆಯಿದೆ. ವಾರಾಬಂದಿ ಇಲ್ಲದೆ ನಿರಂತರವಾಗಿ ನಾರಾಯಣಪುರ ಬಲದಂಡೆ ನಾಲೆಗೆ ನೀರು ಹರಿಸಬೇಕು ಎನ್ನುವುದು ರೈತರು ಒತ್ತಾಯವಾಗಿದೆ.
ನೀರಿನ ಸಂಗ್ರಹ ಸ್ಥಿತಿಗತಿ ಹೀಗಿದೆ…
ಆಲಮಟ್ಟಿ ಜಲಾಶಯ 123.08 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಗುರುವಾರ 87.227 ಟಿಎಂಸಿ ನೀರು ಸಂಗ್ರಹವಾಗಿದೆ. 33.31 ಟಿಎಂಸಿ ಸಂಗ್ರಹ ಸಾಮರ್ಥ್ಯದ ನಾರಾಯಣಪುರ ಜಲಾಶಯದಲ್ಲಿ 21.26 ಟಿಎಂಸಿ ನೀರು ಸಂಗ್ರಹವಿದೆ. ಒಳಹರಿವು ಇದೇ ರೀತಿ ಮುಂದುವರಿದರೆ ಒಂದು ವಾರದಲ್ಲಿ ಎರಡೂ ಜಲಾಶಯ ಭರ್ತಿಯಾಗಲಿವೆ ಎಂದು ಕೃಷ್ಣಾಭಾಗ್ಯ ಜಲನಿಗಮದ ಮೂಲಗಳು ತಿಳಿಸಿವೆ.
ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದ ಒಳಹರಿವು ಉತ್ತಮ ಸ್ಥಿತಿಯಲ್ಲಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಐಸಿಸಿ ಸಭೆ ಕರೆಯಲು ಸಮಿತಿ ಅಧ್ಯಕ್ಷ ಆರ್.ವಿ.ತಿಮ್ಮಾಪುರಗೆ ಪತ್ರ ಬರೆಯಲಾಗಿದೆ. ರೈತರ ಬೇಡಿಕೆಯಂತೆ ಜುಲೈ ಕೊನೆಯ ವಾರದಲ್ಲಿ ನಾರಾಯಣಪುರ ನಾಲೆಗೆ ನೀರು ಹರಿಸಲು ಯಾವುದೇ ಸಮಸ್ಯೆಯಿಲ್ಲ. ಶೀಘ್ರ ಐಸಿಸಿ ಸಭೆ ಕರೆದು ನೀರು ಬಿಡುವ ತೀರ್ಮಾನ ಮಾಡಲಾಗುವುದು.
| ಪ್ರೇಮ್‌ಸಿಂಗ್ ಕೆಬಿಜೆಎನ್‌ಎಲ್, ಸಿಇ, ಭೀಮರಾಯನಗುಡಿ
ಕಳೆದ ವರ್ಷ ಆಲಮಟ್ಟಿ ಹಾಗೂ ಬಸವಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದರೂ ನಾಲೆಗೆ ಹರಿಸದೆ ಸರ್ಕಾರ ರೈತರ ಜತೆ ಚೆಲ್ಲಾಟವಾಡಿತ್ತು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಸದ್ಯ ಜಲಾಶಯಗಳು ಭರ್ತಿಯಾಗುತ್ತಿದ್ದು, ತಕ್ಷಣವೇ ಐಸಿಸಿ ಸಭೆ ಕರೆದು ಯಾವುದೇ ಷರತ್ತು ಇಲ್ಲದೆ ನಾಲೆಗೆ ನೀರು ಹರಿಸಬೇಕು.
| ಪ್ರಭಾಕರ ಪಾಟೀಲ್ ಇಂಗಳದಾಳ
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ, ದೇವದುರ್ಗ