ಅಖಿಲ ಭಾರತ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ ವಿವಿಧ ಸಂಘಟನೆಗಳು

2209 Devadurga CITU Meeting
ಭಾರತ ಬಂದ್‌ಗೆ ಬೆಂಬಲಿಸಿ ದೇವದುರ್ಗದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಮಾತನಾಡಿದರು.
Published on

ದೇವದುರ್ಗ: ಕೃಷಿ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಸೆ.27ರಂದು ಕರೆ ನೀಡಿರುವ ಭಾರತ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘಟನೆಗಳು ಒಮ್ಮತದ ನಿರ್ಣಯ ಪ್ರಕಟಿಸಿದವು.

ಸಿಐಟಿಯು ತಾಲೂಕು ಅಧ್ಯಕ್ಷ ಗಿರಿಯಪ್ಪ ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಹೊಸಕೃಷಿ ಹಾಗೂ ಎಪಿಎಂಸಿ ಕಾಯ್ದೆ ಜಾರಿಗೆ ತರುವ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಈ ಕಾಯ್ದೆಗಳಿಂದ ರೈತರ ಖಾಸಗಿ ಕಂಪನಿಗಳಿಗೆ ತಮ್ಮ ಅಮೂಲ್ಯವಾದ ಭೂಮಿ ಮಾರಾಟ ಮಾಡುವ ಒತ್ತಡ ಹೆಚ್ಚಾಗಲಿದೆ. ಯಾವುದೇ ಚರ್ಚೆ, ಮಾಹಿತಿ ಇಲ್ಲದೆ ದೇಶದ ದುಡಿಯುವ ವರ್ಗದ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮೂಲಕ ಬಂಡವಾಳಶಾಹಿಗಳ ತಾಳಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಕುಣಿಯುತ್ತಿದೆ. ಇದರಿಂದ ಬೆಲೆ ಏರಿಕೆ ಹಾಗೂ ದೇಶದ ಆರ್ಥಿಕತೆ ದಿವಾಳಿಯಾಗುತ್ತಿದೆ. ಈ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಅಖಿಲ ಭಾರತ ರೈತ ಸಂಘಟನೆಗಳು ಸೆ.27ರಂದು ಭಾರತ ಬಂದ್‌ಗೆ ಕರೆ ನೀಡಿವೆ. ಅಂದು ತಾಲೂಕಾದ್ಯಂತ ಹೋರಾಟ ನಡೆಸಿ, ದೇವದುರ್ಗ ಬಂದ್ ಮಾಡುತ್ತೇವೆ. ಇದಕ್ಕೆ ಎಲ್ಲ ಸಂಘಟನಗಳು ಹಾಗೂ ವ್ಯಾಪಾರಿಗಳು ಸಹಕಾರ ನೀಡುವ ಮೂಲಕ ಹೋರಾಟ ಯಶಸ್ವಿಗೊಳಿಸಬೇಕು ಎಂದರು.

ರಾಜ್ಯ ರೈತ ಸಂಘದ ತಾಲೂಕು ಕಾರ್ಯದರ್ಶಿ ಮರಿಲಿಂಗಪ್ಪ ಪಾಟೀಲ್ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಜೆ.ಎಸ್.ಹನುಮಂತ, ಯೂಸಿಫ್, ಹನುಮಂತ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net