ಎಕರೆಗೆ 25 ಸಾವಿರ ರೂ. ಪರಿಹಾರ ನೀಡಲು ಕರ್ನಾಟಕ ಜಾಗೃತ ರೈತ ಸಂಘ ಒತ್ತಾಯ

161122 Devadurga Farmers Appeal
ದೇವದುರ್ಗದಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್‌ಗೆ ಕರ್ನಾಟಕ ಜಾಗೃತ ರೈತ ಸಂಘ ಮಂಗಳವಾರ ಮನವಿ ಸಲ್ಲಿಸಿತು.
Published on

ದೇವದುರ್ಗ: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಎಕರೆ ಕನಿಷ್ಠ 25 ಸಾವಿರ ರೂ. ಬೆಳೆ ಹಾನಿ ಪರಿಹಾರ ನೀಡುವಂತೆ ಒತ್ತಾಯಿಸಿ ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ಕರ್ನಾಟಕ ಜಾಗೃತ ರೈತ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಅತಿಯಾದ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಭತ್ತ, ಹತ್ತಿ, ತೊಗರಿ, ಮೆಣಸಿನಕಾಯಿ, ಸಜ್ಜೆ ಸೇರಿ ವಿವಿಧ ಬೆಳೆಗಳು ಸಂಪೂರ್ಣ ಹಾಳಾಗಿವೆ. ರೈತರು ಎಕರೆಗೆ 25ರಿಂದ 30 ಸಾವಿರ ರೂ. ಖರ್ಚು ಮಾಡಿದ್ದಾರೆ. ಫಸಲು ಕೈ ಸೇರುವ ಸಂದರ್ಭದಲ್ಲಿ ಅತಿಯಾದ ಮಳೆಯಿಂದ ಬೆಳೆಗಳು ಸಂಪೂರ್ಣ ಹಾಳಾಗಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದರೆ, ತಾಲೂಕು ಆಡಳಿತ ನೆಪಕ್ಕೆ ಸಮೀಕ್ಷೆ ನಡೆಸಿದೆ ಎಂದು ಆರೋಪಿಸಿದರು.

ಕೂಡಲೇ ಸಮಗ್ರ ಸಮೀಕ್ಷೆ ನಡೆಸಿ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಸಣ್ಣ, ಅತಿಸಣ್ಣ ಹಿಡುವಳಿದಾರರ ಬ್ಯಾಂಕ್ ಹಾಗೂ ಸಹಕಾರ ಸಂಘದ ಸಾಲ ಮನ್ನಾ ಮಾಡಬೇಕು. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರ ವಸ್ತುಗಳ ಸಬ್ಸಿಡಿ ಪ್ರಮಾಣ ಹೆಚ್ಚಿಸಬೇಕು. ವೈಜ್ಞಾನಿಕ ಬೆಂಬಲ ಬೆಲೆಯೊಂದಿಗೆ ಎಲ್ಲ ಬೆಳೆಗಳಿಗೆ ಖರೀದಿ ಕೇಂದ್ರ ತೆರೆಯಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೈಗೊಂಡ ಕೃಷಿ ಹಾಗೂ ರೈತ ವಿರೋಧಿ ಒಪ್ಪಂದ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಬಸವರಾಜ ಮಿಯ್ಯಪುರ, ಮುತ್ತಯ್ಯ ಮಸರಕಲ್, ಶ್ರೀಮಂತ ಒಗ್ಗರ್, ಮಲ್ಲಯ್ಯ, ರಮೇಶ, ಪ್ರಭು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net