

ದೇವದುರ್ಗ: ಲೋಕಸಭೆ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಶಾಂತಿಯುತ ಮತದಾನಕ್ಕೆ ಮತದಾರರು ಸಹಕಾರ ನೀಡಬೇಕು. ತಾಲೂಕಿನಲ್ಲಿ 2.39 ಲಕ್ಷ ಮತದಾರರಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಎಂ.ಎನ್.ಚೇತನ್ ಕುಮಾರ ತಿಳಿಸಿದ್ದಾರೆ.
ಪಟ್ಟಣದ ಮಿನಿವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, 1,17,480 ಪುರುಷ, 1,20,806 ಮಹಿಳೆಯರು ಹಾಗೂ 7 ತೃತೀಯ ಲಿಂಗಿಗಳು ಸೇರಿ 2,39,293 ಮತದಾರರಿದ್ದಾರೆ. ನಾಲ್ಕು ಹೋಬಳಿಯಲ್ಲಿ 267 ಮತದಾನ ಕೇಂದ್ರ ಸ್ಥಾಪಿಸಿದ್ದು 22 ಅತಿಸೂಕ್ಷ್ಮ ಹಾಗೂ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. 125 ಕಡೆ ವೆಬ್ ಕ್ಯಾಮರಾ ಅಳವಡಿಸಲಾಗಿದೆ ಎಂದರು.
ಮತದಾನ ಪ್ರಮಾಣ ಹೆಚ್ಚಳ ಮಾಡಲು 9 ಕಡೆ ವಿಶೇಷ ಬೂತ್ ಸ್ಥಾಪಿಸಲಾಗಿದೆ. ಮಹಿಳೆಯರು ಹೆಚ್ಚಿರುವ ಐದು ಕಡೆ ಸಖಿ (ಪಿಂಕ್) ಕೇಂದ್ರ, ವಿಕಲಾಂಗರು, ಹಿರಿಯ ನಾಗರಿಕರು, ಅತಿ ಹೆಚ್ಚು ಯುವ ಮತದಾರರು ಇರುವ ಕಡೆ ವಿಶೇಷ ಬೂತ್ ಸ್ಥಾಪಿಸಲಾಗಿದೆ. ಚುನಾವಣೆ ಕರ್ತವ್ಯಕ್ಕೆ ಒಟ್ಟು 1335 ನೌಕರರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಭದ್ರತೆಗಾಗಿ 600 ಪೊಲೀಸರು ಹಾಗೂ 300 ಸಿಬ್ಬಂದಿ ವಿವಿಧ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಮತದಾನ ಕೇಂದ್ರಗಳಿಗೆ ತಲುಪಲು 29 ಸಾರಿಗೆ ಸಂಸ್ಥೆ ಬಸ್, 50 ಕ್ರೂಷರ್ ಹಾಗೂ ಐದು ಶಾಲಾ ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಚೇತನ್ ಕುಮಾರ ಹೇಳಿದರು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಇದ್ದರು.