ವೈಜ್ಞಾನಿಕ ಪರಿಹಾರ ನಿಗದಿಪಡಿಸಿ

sri manavo
ಶೃಂಗೇರಿ ಪಪಂನಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಹರೀಶ್ ವಿ. ಶೆಟ್ಟಿ, ರತ್ನಾಕರ್ ಶೆಟ್ಟಿ, ರಾಧಿಕಾ, ಶ್ರೀವಿದ್ಯಾ, ಶ್ರೀಪಾದರಾವ್, ದಿನೇಶ್ ಅಂಗುರ್ಡಿ ಇತರರಿದ್ದರು.
Published on

ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಕುಟುಂಬಗಳಿಗೆ ವೈಜ್ಞಾನಿಕವಾಗಿ ಮತ್ತು ಚರಾಸ್ತಿಗಳಿಗೆ ತುರ್ತಾಗಿ ಮೌಲ್ಯ ನಿಗದಿಪಡಿಸಿ ಪುರ್ನವಸತಿ ಸೌಲಭ್ಯ ಒದಗಿಸಬೇಕು. ಅದಕ್ಕಾಗಿ ಪ್ರತ್ಯೇಕ ವಿಶೇಷ ತಂಡ ರಚಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಕೆರೆಕಟ್ಟೆ ಗ್ರಾಪಂ ಗ್ರಾಮಸ್ಥರು ಮನವಿ ಮಾಡಿದರು.

ಮಂಗಳವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಪಪಂನಲ್ಲಿ ಅಹವಾಲು ಸಲ್ಲಿಸಿ, ತಾಲೂಕಿನ ಸಮಸ್ಯೆಗಳನ್ನು ತಿಳಿಸಿದರು.
ಇಲ್ಲಿ ನೂರಾರು ವರ್ಷಗಳಿಂದ ಕೃಷಿ ಮಾಡುತ್ತಿರುವ ಕುಟುಂಬದವರ ಜಮೀನು ಮತ್ತು ಮನೆಗಳಿಗೆ ಅಧಿಕೃತ ದಾಖಲೆಗಳಿಲ್ಲ. ಮನೆಗಳು ಹಾಗೂ ತೋಟಗಳು ಅರಣ್ಯ ಇಲಾಖೆಯ ಸರ್ವೇ ಸಂದರ್ಭದಲ್ಲಿ ಡಿಲೈನ್‌ಗೆ ಬರುತ್ತವೆ ಎಂದು ಮೌಲ್ಯಮಾಪನ ಮಾಡದೆ ಬಿಟ್ಟಿದ್ದಾರೆ ಎಂದು ತಿಳಿಸಿದರು.
ನಮಗೆ ಪುರ್ನವಸತಿ ಯೋಜನೆ ಪರಿಹಾರ ಹಣ ಬಂದಿಲ್ಲ. ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ವಾರಕ್ಕೆ ಒಂದು ಬಾರಿ ಸರ್ವೇ ಮಾಡುತ್ತಿವೆ. ಸುಮಾರು 1200 ಕುಟುಂಬಗಳು ಇವೆ. ಹಾಗಾಗಿ 1200 ವಾರಗಳು ಬೇಕಾಗುತ್ತದೆ. ಅರ್ಜಿ ನಮೂನೆ 63-57 ಹಾಗೂ 94ಸಿ ಹಾಗೂ 94ಸಿಸಿಗಳಿಗೆ ನಾವು ಅರ್ಜಿ ಸಲ್ಲಿಸಿದ್ದು, ಅರಣ್ಯ ಇಲಾಖೆ ಸುಪರ್ದಿಯಿಂದ ನಮ್ಮ ಪೂರ್ವಜರ ಜಮೀನು ಹಾಗೂ ಮನೆಗಳ ಸಮಸ್ಯೆಗಳ ಕುರಿತು ಪರಿಹಾರ ದೊರಕುವ ನಿಟ್ಟಿನಲ್ಲಿ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕು. ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಟವರ್‌ಗಾಗಿ ಗುಲಗುಂಜಿ ಮನೆ ಹಾಗೂ ಹಾದಿಕೆರೆಗೆ ಅನುದಾನ ಬಿಡುಗಡೆ ಆಗಿದ್ದರೂ ಅರಣ್ಯ ಇಲಾಖೆಯ ತೊಡಕಿನಿಂದಾಗಿ ಕಾಮಗಾರಿ ಕೈಗೊಳ್ಳಲು ಬಿಡುತ್ತಿಲ್ಲ ಎಂದು ಗ್ರಾಮಸ್ಥರಾದ ಸುದೇಶ್, ಗೋಪಾಲ್, ಲಕ್ಷ್ಮೀ, ಅಶೋಕ್, ನಾಗರಾಜ್ ನಾಯ್ಕ ದೂರಿದರು.
ಸಾರ್ವಜನಿಕರ ಅಹವಾಲು ಸ್ವೀಕರಿಸಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಮಲೆನಾಡಿನಲ್ಲಿ ಸಮಸ್ಯೆಗಳು ಸಾಕಷ್ಟಿವೆ. ಗ್ರಾಮೀಣ ಭಾಗದ ರಸ್ತೆಗಳು ತೀರ ಹದಗೆಟ್ಟಿವೆ. ನೆಟ್‌ವರ್ಕ್ ಸಮಸ್ಯೆಗಳು ಎದ್ದು ಕಾಣುತ್ತಿದ್ದು, 217 ತಾಲೂಕಿಗೆ ಗುಣಮಟ್ಟದ ಟವರ್ ನಿರ್ಮಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಶೃಂಗೇರಿ ಪವಿತ್ರ ಕ್ಷೇತ್ರ. ಇಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ತನಿಕೋಡು-ಕೆರೆಕಟ್ಟೆ, ಮಾಳ-ಕಾರ್ಕಳ ರಸ್ತೆ ಅಗಲೀಕರಣ, ಪಟ್ಟಣದ ಗಾಂಧಿ ಮೈದಾನ ಹಾಗೂ ಮುಖ್ಯರಸ್ತೆಗಳಿಗೆ ಸುಸ್ಥಿತಿ ಕುರಿತು ಸಂಬಂಧಪಟ್ಟ ಇಲಾಖೆಯವರ ಬಳಿ ಚರ್ಚಿಸಿ ಅನುದಾನ ನೀಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕೋಟ ಶ್ರೀನಿವಾಸ ಪೂಜಾರಿ ಅವರು ಕೆರೆಕಟ್ಟೆ, ಹೆಗ್ಗದ್ದೆ ಶ್ರೀ ಅನಂತಪದ್ಮನಾಭ ದೇವಸ್ಥಾನ, ಅಡ್ಡಗದ್ದೆ ಗ್ರಾಪಂ ಹಾಗೂ ಗ್ರಾಮಭಾರತ್ ಟ್ರಸ್ಟ್‌ಗೆ ಭೇಟಿ ನೀಡಿದರು.
ಮಾಜಿ ಸಚಿವ ಡಿ.ಎನ್.ಜೀವರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ್ ತಲಗಾರ್, ಪ್ರಧಾನ ಕಾರ್ಯದರ್ಶಿ ನೂತನ್‌ಕುಮಾರ್, ಪಪಂ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್, ಉಪಾಧ್ಯಕ್ಷ ಎಂ.ಎಲ್.ಪ್ರಕಾಶ್, ಬಿಜೆಪಿ ಮುಖಂಡರಾದ ಕಚ್ಚೋಡಿ ಶ್ರೀನಿವಾಸ್, ಎಂ.ಎಸ್.ರಂಗನಾಥ್, ಚೇತನ್ ಹೆಗಡೆ, ಸತೀಶ್ ನಡುತೋಟ, ಅರುಣ್‌ಕುಮಾರ್, ಪದ್ಮನಾಭ ಹೆಗಡೆ, ಪ್ರವೀಣ್ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net