

ಸಿಂಧನೂರು: ನಗರದಲ್ಲಿ ಐದಾರು ವರ್ಷಗಳ ಹಿಂದೆ ನಗರೋತ್ಥಾನ ಯೋಜನೆಯಡಿ ನಿರ್ಮಿಸಿದ ರಸ್ತೆಗಳು ಹದಗೆಟ್ಟು ಅಧ್ವಾನ ಸ್ಥಿತಿಗೆ ತಲುಪಿದ್ದು, ಜನರು ಸಂಚರಿಸಲು ತೊಂದರೆ ಅನುಭವಿಸಬೇಕಾಗಿದೆ.
ನಗರದಲ್ಲಿ 31 ವಾರ್ಡ್‌ಗಳಿದ್ದು, ಎಲ್ಲ ಕಡೆ ನಗರೋತ್ಥಾನ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚ ಮಾಡಿ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗಿತ್ತು. ನಗರೋತ್ಥಾನ 1, 2, 3 ಮತ್ತು 4ನೇ ಹಂತದಲ್ಲಿ ರಸ್ತೆ ಡಾಂಬರೀಕರಣ ಕೈಗೆತ್ತಿಕೊಳ್ಳಲಾಗಿತ್ತು. ಈಗ ಐದಾರು ವರ್ಷಗಳಲ್ಲಿ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ನಗರೋತ್ಥಾನ ಯೋಜನೆಯಡಿ ಪ್ರತಿ ರಸ್ತೆಗೆ ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ, 20ಕ್ಕೂ ಹೆಚ್ಚು ರಸ್ತೆಗಳ ಡಾಂಬರ್ ಕಿತ್ತು ಹೋಗಿದೆ. ರಸ್ತೆಗಳ ದುರಸ್ತಿ ಕಾರ್ಯ ಸಕಾಲಕ್ಕೆ ಆರಂಭಿಸದೇ ಇರುವ ಪರಿಣಾಮ ತಗ್ಗುಗುಂಡಿಗಳು ಬಿದ್ದು, ಮಳೆ ನೀರು ನಿಂತು ಮತ್ತಷ್ಟು ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ.
ಮಳೆಯಿಂದ ರಸ್ತೆಗಳು ಹಾಳು: ನಗರದ ಹಳೇ ಬಜಾರ್, ಪ್ರಶಾಂತ ನಗರ, ಶರಣಬಸವೇಶ್ವರ ಕಾಲನಿ, ಆದರ್ಶ ಕಾಲನಿ, ವೆಂಕಟೇಶ್ವರ ನಗರ, ನಟರಾಜ ಕಾಲನಿ, ಖದರಿಯಾ ಕಾಲನಿ, ಇಂದಿರಾ ನಗರ, ಮಹಿಬೂಬಿಯಾ ಕಾಲನಿ ಸೇರಿ ವಿವಿಧ ಬಡಾವಣೆ ರಸ್ತೆಗಳು ಹಾಳಾಗಿವೆ. ನಿರಂತರ ಮಳೆಯಿಂದ ರಸ್ತೆಗಳೆಲ್ಲ ಹಾಳಾಗಿ ಹೋಗಿವೆ. ತಾತ್ಕಾಲಿಕ ದುರಸ್ತಿಯೂ ಇಲ್ಲ. ಇದರಿಂದ ಜನರು ಸಂಚರಿಸುವುದು ಕಷ್ಟವಾಗಿದೆ. ಮಳೆ ಬಂದರಂತೂ ರಸ್ತೆ ಕೆಸರುಮಯವಾಗಿ ಓಡಾಡುವುದು ಸವಾಲಾಗಿದೆ.
ಸಿಸಿ ರಸ್ತೆಗಳಲ್ಲಿ ಬಿರುಕು: ಕಳೆದ ಮೂರು ವರ್ಷಗಳ ಹಿಂದೆ ಹತ್ತಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ನಿರ್ಮಿಸಿದ ಸಿಸಿ ರಸ್ತೆಗಳು ಬಿರುಕು ಬಿಟ್ಟಿವೆ. ಕಳಪೆ ಕಾಮಗಾರಿಯಿಂದ ರಸ್ತೆಗಳು ಹಾಳಾಗಿದ್ದು ಧೂಳು ಹೆಚ್ಚಿದೆ. ಶಾಶ್ವತ ರಸ್ತೆ ನಿರ್ಮಾಣ ಮಾಡಿದರೂ ಸಮಸ್ಯೆ ತಪ್ಪಿಲ್ಲ. ಎರಡು ವರ್ಷಗಳ ಹಿಂದೆ ಮಾಡಿದ್ದ 40ನೇ ಉಪಕಾಲುವೆ ರಸ್ತೆ ಹಾಳಾಗಿದ್ದು ನಂತರ ಎರಡನೇ ಸಲ ದುರಸ್ತಿ ಮಾಡಲಾಗಿದೆ. ಸತತ ಮಳೆಯಿಂದ ಡಾಂಬರೀಕರಣಗೊಂಡ ರಸ್ತೆಗಳು ಹಾಳಾಗಿದ್ದು ಹೊಸದಾಗಿ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಆಡಳಿತ ಮುಂದಾಗಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.
ಸಿಂಧನೂರಿನಲ್ಲಿ ಸತತ ಮಳೆಯಿಂದ ವಿವಿಧ ಬಡಾವಣೆಗಳಲ್ಲಿ ರಸ್ತೆ ಹಾಳಾಗಿರುವ ಮಾಹಿತಿ ಇದೆ. ಸಿಸಿ ರಸ್ತೆ ಇದ್ದಲ್ಲಿ ಸಮಸ್ಯೆ ಇಲ್ಲ. ಡಾಂಬರೀಕರಣಗೊಂಡ ಹಳೇ ರಸ್ತೆಗಳು ಹದಗೆಟ್ಟಿವೆ. ಮುಂದಿನ ದಿನಗಳಲ್ಲಿ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು. ಪಾಂಡುರಂಗ ಇಟಗಿ ಪೌರಾಯುಕ್ತ, ನಗರಸಭೆ, ಸಿಂಧನೂರು ಸಿಂಧನೂರಿನಲ್ಲಿ ಈ ಹಿಂದೆ ನಗರೋತ್ಥಾನ ಯೋಜನೆಯಡಿ ನಿರ್ಮಾಣಗೊಂಡ ಡಾಂಬರೀಕರಣ ರಸ್ತೆಗಳು ಹಾಳಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಮಳೆಯಿಂದ ರಸ್ತೆಗಳು ಮತ್ತಷ್ಟು ಹಾಳಾಗಿವೆ. ಕೂಡಲೇ ರಸ್ತೆ ರಿಪೇರಿಗೆ ಮುಂದಾಗಬೇಕು. ರಾಮಕೃಷ್ಣ ಭಜಂತ್ರಿ ಸಿಂಧನೂರು ನಿವಾಸಿ