

ಪಾಲಾಕ್ಷ ಬಿ. ತಿಪ್ಪಳ್ಳಿ ಯಲಬುರ್ಗಾ
ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ತಾಲೂಕು ಕ್ರೀಡಾಂಗಣ ಕಟ್ಟಡ ಶಿಥಿಲಗೊಂಡಿದೆ. ಹಲವು ವರ್ಷಗಳಿಂದ ಮೂಲ ಸೌಕರ್ಯಗಳು ಮರೀಚಿಕೆಯಾಗಿದ್ದು, ವಾಯುವಿಹಾರಿಗಳು, ಕ್ರೀಡಾಪಟುಗಳಿಗೆ ಸಮಸ್ಯೆಯಾಗಿದೆ.
ಕ್ರೀಡಾಂಗಣ 2006ರಲ್ಲಿ ನಿರ್ಮಾಣವಾಗಿದ್ದು, ಕಾಲಕಾಲಕ್ಕೆ ಅಭಿವೃದ್ಧಿ ಕಾಣದೇ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಅಭಿವೃದ್ಧಿಗೆ ಲಕ್ಷಾಂತರ ರೂ. ಖರ್ಚು ಮಾಡಿದರೂ ಪ್ರಗತಿ ಮಾತ್ರ ಶೂನ್ಯವಾಗಿದೆ. ಕಟ್ಟಡದ ಮೇಲ್ಛಾವಣಿ ಕುಸಿಯುವ ಹಂತಕ್ಕೆ ಜಾರಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಅನಾಹುತಕ್ಕೆ ಕಾರಣವಾಗಲಿದೆ. ಮೆಟ್ಟಿಲುಗಳು ಕಿತ್ತು ಹೋಗಿವೆ. ಕ್ರೀಡಾಂಗಣದಲ್ಲಿ ಸಾರ್ವಜನಿಕ ಹಾಗೂ ಸರ್ಕಾರಿ ಕಾರ್ಯಕ್ರಮ ಸೇರಿ ವಿವಿಧ ಕ್ರೀಡಾ ಚಟುವಟಿಕೆಗಳು ನಡೆಯಲು ಅಗತ್ಯ ವ್ಯವಸ್ಥೆ ಇಲ್ಲವಾಗಿದ್ದು, ಜನರು ತೊಂದರೆ ಅನುಭವಿಸುವಂತಾಗಿದೆ.
51.47 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ: ತಾಲೂಕು ಕ್ರೀಡಾಂಗಣ ಕಳೆದ ಎರಡ್ಮೂರು ವರ್ಷಗಳ ಹಿಂದೆ ನಗರೋತ್ಥಾನ ಅನುದಾನದಡಿ 51.47 ಲಕ್ಷ ರೂ. ವೆಚ್ಚದಲ್ಲಿ ರನ್ನಿಂಗ್ ಟ್ರ್ಯಾಕ್, ಒಳಾಂಗಣ ಕ್ರೀಡಾಂಗಣ ಕಟ್ಟಡ ನಿರ್ಮಾಣ ಸೇರಿ ಸಣ್ಣ ಪುಟ್ಟ ಕಾಮಗಾರಿ ತರಾತುರಿಯಲ್ಲಿ ನಡೆಸಲಾಗಿದೆ. ಒಳಾಂಗಣ ಕ್ರೀಡಾಂಗಣ ಕಟ್ಟಡ ಕೆಲಸವೂ ಅರೆಬರೆಯಾಗಿದ್ದು, ಅಗತ್ಯ ಸೌಲಭ್ಯ ಕಲ್ಪಿಸಿಲ್ಲ.
ತಡೆಗೋಡೆ ನಿರ್ಮಿಸಲೂ ಉದಾಸೀನ
ಕ್ರೀಡಾಂಗಣದಲ್ಲಿ ಕುಡಿವ ನೀರು, ಶೌಚಗೃಹ ಹಾಗೂ ಸರಿಯಾಗಿ ವಿದ್ಯುತ್ ವ್ಯವಸ್ಥೆ ಮಾಡಿಲ್ಲ. ಕ್ರೀಡಾಂಗಣ ಸಮತಟ್ಟು ಇಲ್ಲದ ಪರಿಣಾಮ ಮಳೆ ಬಂದರೆ ನೀರು ನಿಲ್ಲುತ್ತದೆ. ಕ್ರೀಡೆಗೆ ಸಂಬಂಧಿಸಿದ ಪರಿಕರಗಳು ಸಹ ಇಲ್ಲ. ರಸ್ತೆ ಪಕ್ಕದಲ್ಲಿ ಮಾತ್ರ ಕ್ರೀಡಾಂಗಣಕ್ಕೆ ಕಾಂಪೌಂಡ್ ನಿರ್ಮಿಸಲಾಗಿದ್ದು, ಉಳಿದಂತೆ ಸುತ್ತಲೂ ತಂತಿ ಬೇಲಿ ಅಳವಡಿಸಲಾಗಿದೆ. ತಡೆಗೋಡೆ ಇಲ್ಲದ ಕಾರಣ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕ್ರೀಡಾ ತರಬೇತುದಾರನ್ನು ನೇಮಕ ಮಾಡಿಲ್ಲ. ಇದರಿಂದ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಸಿಗದಂತಾಗಿದೆ.
ಮನವಿ ಸಲ್ಲಿಸಿದರೂ ಸ್ಪಂದನೆ ಇಲ್ಲ
ವಾಯು ವಿಹಾರಿಗಳಿಗೆ ಆಸನದ ವ್ಯವಸ್ಥೆ ಇಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಮೂಲ ಸೌಕರ್ಯ ಇಲ್ಲದ ಪರಿಣಾಮ ಕ್ರೀಡಾಪಟುಗಳು ಉನ್ನತ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಕ್ರೀಡಾಂಗಣಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರು ನಾಮಕರಣ ಮಾಡಲಾಗಿದೆ. ಆದರೆ ಅಭಿವೃದ್ಧಿ ಬಗ್ಗೆ ಯಾರೂ ಮುತುವರ್ಜಿ ವಹಿಸಿಲ್ಲ. ತಾಲೂಕಿನಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಕ್ರೀಡಾಂಗಣ ಅಭಿವೃದ್ಧಿಪಡಿಸುವಂತೆ ಸಂಬಂಧಿಸಿದ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಕ್ರೀಡಾಪಟುಗಳು ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಮನವಿ ಪತ್ರಗಳು ಕಸದ ಬುಟ್ಟಿ ಸೇರಿವೆಯೇ ಹೊರತು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಶೀಘ್ರವೇ ಕ್ರೀಡಾಂಗಣ ಅಭಿವೃದ್ಧಿಪಡಿಸಿ ಸಾರ್ವಜನಿಕರು, ವಾಯು ವಿಹಾರಿಗಳು, ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಬೇಕು ಎನ್ನುವುದು ಕ್ರೀಡಾಭಿಮಾನಿಗಳ ಒತ್ತಾಸೆಯಾಗಿದೆ.
ತಾಲೂಕು ಕ್ರೀಡಾಂಗಣ ಸುಸಜ್ಜಿತವಾಗಿ ನಿರ್ಮಾಣವಾಗಬೇಕು. ಕುಡಿವ ನೀರು, ಶೌಚಗೃಹ, ಸ್ವಿಮ್ಮಿಂಗ್ ಪೂಲ್, ರನ್ನಿಂಗ್ ಟ್ರ್ಯಾಕ್ ಆಗಬೇಕಿದೆ. ಕ್ರೀಡಾ ತರಬೇತುದಾರರ ನೇಮಕವಾಗಬೇಕು. ಕ್ರೀಡಾಂಗಣ ಅಭಿವೃದ್ಧಿಪಡಿಸುವಂತೆ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ಹನುಮಂತಪ್ಪ ವಗ್ಯಾನವರ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿ, ಯಲಬುರ್ಗಾ ತಾಲೂಕು ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಕೆಕೆಆರ್‌ಡಿಬಿ ನಗರೋತ್ಥಾನ 4ರಡಿ ಇನ್ನೊಂದು ಹಂತದಲ್ಲಿ ಅನುದಾನ ಬಿಡುಗಡೆಯಾಗಲಿದ್ದು, ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಒಳಾಂಗಣ ಕ್ರೀಡಾಂಗಣ ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು. ಕ್ರೀಡಾಂಗಣ ಕಟ್ಟಡ ದುರಸ್ತಿಗೆ ಕ್ರಮವಹಿಸಲಾಗುವುದು.ಅಮರೇಶ ಹುಬ್ಬಳ್ಳಿ, ಪಪಂ ಅಧ್ಯಕ್ಷ, ಯಲಬುರ್ಗಾ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಬೇಕು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳ ಅನುಕೂಲಕ್ಕಾಗಿ ಕ್ರೀಡಾ ಸಾಮಗ್ರಿ ಮತ್ತು ಮೂಲ ಸೌಕರ್ಯ ಕಲ್ಪಿಸಬೇಕು. ಪ್ರತಿದಿನ ವಾಯುವಿಹಾರಕ್ಕೆ ಬರುವ ಜನರಿಗೆ ನೀರು, ಶೌಚಗೃಹ, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಬೇಕು.ಶರಣಪ್ಪ ರಾಂಪುರ, ವಾಯುವಿಹಾರಿ, ಯಲಬುರ್ಗಾ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿ ವಹಿಸುತ್ತಿಲ್ಲ. ಕ್ರೀಡಾಂಗಣದ ಅಭಿವೃದ್ಧಿ ಹಾಗೂ ಮೂಲ ಸೌಕರ್ಯ ಕಲ್ಪಿಸುವಂತೆ ಹಲವಾರು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮುತುವರ್ಜಿ ವಹಿಸುತ್ತಿಲ್ಲ.ಪ್ರಕಾಶ ಛಲವಾದಿ, ಕ್ರೀಡಾಪಟು, ಯಲಬುರ್ಗಾ