

ವಿಜಯವಾಣಿ ವಿಶೇಷ ಹಿರೇಕೆರೂರ
ಪಟ್ಟಣ ಪಂಚಾಯಿತಿಯ ವಿವಿಧ ವಾರ್ಡ್ಗಳ ರಸ್ತೆಗಳು ಹದಗೆಟ್ಟಿದ್ದರಿಂದ ಜನರ ಹಾಗೂ ವಾಹನ ಓಡಾಟಕ್ಕೆ ತೊಂದರೆಯಾಗಿದೆ.
20 ವಾರ್ಡ್ಗಳ ವ್ಯಾಪ್ತಿಯಲ್ಲಿ 9 ಕಿಮೀ ಕಲ್ಲು ರಸ್ತೆ, 43.79 ಕಿಮೀ ಡಾಂಬರೀಕರಣ ಮತ್ತು ಕಾಂಕ್ರೀಟ್, 11.21 ಕಿಮೀ ಮಣ್ಣಿನ ರಸ್ತೆ ಇದೆ. 64 ಕಿಮೀ ಪೈಕಿ 44 ಕಿಮೀ ಮಾತ್ರ ಸುಧಾರಣೆಯಾಗಿದೆ. ಮಂಜುನಾಥ ನಗರ, ರಾಘವೇಂದ್ರ ಕಾಲನಿ, ಸ್ವಾಮಿ ವಿವೇಕಾನಂದ ನಗರ, ವಿದ್ಯಾನಗರ, ತಂಬಾಕದನಗರ, ಅಯ್ಯಪ್ಪಸ್ವಾಮಿನಗರ, ಬಸವೇಶ್ವರನಗರ, ಜಾವಿದಖಾನ್ನಗರ, ಟಿಪ್ಪು ನಗರ, ಜನತಾ ಪ್ಲಾಟ್, ಆಜಾದ್ನಗರ, ಮುಗಳಳ್ಳಿ ಪ್ಲಾಟ್, ಕಾಳಿದಾಸನಗರ, ಚೌಡೇಶ್ವರಿನಗರ, ಶಾಂತಿಧಾಮ ರಸ್ತೆ, ಜಾಲಿಕಟ್ಟಿ, ವಿಜಯನಗರ, ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಿಂದ ಸಾಗುವ ದುರ್ಗಾದೇವಿ ದೇವಸ್ಥಾನ ರಸ್ತೆ, ಅಂಬೇಡ್ಕರ್ ನಗರ ಸೇರಿ 20 ಕಿಮೀ ಅಭಿವೃದ್ಧಿಪಡಿಸಬೇಕಿದೆ.
ಒಳಚರಂಡಿ ಕಾಮಗಾರಿಗಾಗಿ ಅಗೆದ ರಸ್ತೆಗಳಲ್ಲಿ ಮತ್ತೆ ಕಾಂಕ್ರೀಟ್ ಮಾಡಿಲ್ಲ. ಇದರಿಂದ ದೊಡ್ಡ ಗುಂಡಿಗಳು ನಿರ್ವಣವಾಗಿದ್ದು ಜನ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಅಯ್ಯಪ್ಪಸ್ವಾಮಿನಗರ, ಅಂಬೇಡ್ಕರ್ ನಗರದಿಂದ ಸಂತೆ ಮೈದಾನಕ್ಕೆ ಸಾಗುವ ರಸ್ತೆ, ತಂಬಾಕದನಗರ, ಬಸವೇಶ್ವರನಗರದಲ್ಲಿ ಮಣ್ಣಿನ ರಸ್ತೆಗಳಿವೆ. ಇಲ್ಲಿ ಬೇಸಿಗೆಯಲ್ಲಿ ಧೂಳಿನ ಸಮಸ್ಯೆಯಾದರೆ, ಮಳೆಗಾಲದಲ್ಲಿ ರಾಡಿಯ ಸಮಸ್ಯೆ.
ಮೀಸಲಾತಿ ಗೊಂದಲದಿಂದ ಎರಡೂವರೆ ವರ್ಷದಿಂದ ಆಡಳಿತ ಸಿಗದಿದ್ದ ಪಪಂ ಸದಸ್ಯರಿಗೆ ಈಗ ಅಧಿಕಾರ ಸಿಕ್ಕಿದೆ. ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲ ಸದಸ್ಯರು ಅಧಿಕಾರ ವಹಿಸಿಕೊಂಡಿದ್ದಾರೆ. ಪಟ್ಟಣದಲ್ಲಿ 3 ವರ್ಷಕ್ಕೊಮ್ಮೆ ನಡೆಯುವ ದುರ್ಗಾದೇವಿ ಜಾತ್ರೆಯನ್ನು ಈ ಬಾರಿ ಫೆ. 23ರಂದು ಆಯೋಜಿಸಲಾಗಿದೆ. ಅಷ್ಟರೊಳಗೆ ರಸ್ತೆ ಸುಧಾರಣೆಗೆ ಗಮನಹರಿಸಬೇಕಿದೆ ಎಂಬ ಒತ್ತಾಯ ಸಾರ್ವಜನಿಕರದ್ದು.
ಪಟ್ಟಣ ಪಂಚಾಯಿತಿಗೆ ಅಂದಾಜು 54 ಲಕ್ಷ ರೂ. ಗಳಷ್ಟು ಮನೆಗಳ ಕರ ಸಂದಾಯವಾಗುತ್ತದೆ. ಇದರೊಟ್ಟಿಗೆ ಬಿ.ಸಿ. ಪಾಟೀಲ ಅವರು ಪ್ರಭಾವಿ ಸಚಿವ. ವಿಶೇಷ ಅನುದಾನ ತರುವ ಮುಖೇನ ರಸ್ತೆ ಅಭಿವೃದ್ಧಿಗೆ ಅವರು ಕಾಳಜಿ ತೋರಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.
ಬಾಕಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಅನುದಾನ ಕೊರತೆಯಿದೆ. ಹೆಚ್ಚಿನ ಅನುದಾನಕ್ಕಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಸೂಚನೆಯಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಬಂದ ನಂತರ ಹಂತ ಹಂತವಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು.|ಸಂತೋಷಕುಮಾರ ಚಂದ್ರಿಕೇರ, ಹಿರೇಕೆರೂರ ಪಪಂ ಮುಖ್ಯಾಧಿಕಾರಿಇಲ್ಲಿನ ಮುಖ್ಯರಸ್ತೆ ಅಭಿವೃದ್ಧಿಪಡಿಸಿದ ಒಂದೇ ವರ್ಷದಲ್ಲಿ ಹಾಳಾಗಿದೆ. ಇದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೆ ರಸ್ತೆ ಅಭಿವೃದ್ಧಿಪಡಿಸಬೇಕು.| ಮೋಹನ ಒಡೆಯರ, ಚೌಡೇಶ್ವರಿ ನಗರ ನಿವಾಸಿನಗರ ನಿರ್ವಣಗೊಂಡು ಅನೇಕ ವರ್ಷಗಳಾಗಿದ್ದರೂ ಮಣ್ಣಿನ ರಸ್ತೆಯಲ್ಲೇ ಓಡಾಡಬೇಕಿದೆ. ಪಪಂ ಕೇವಲ ತೆರಿಗೆ ಸಂಗ್ರಹಿಸುತ್ತದೆ. ಮತ ಹಾಕಿಸಿಕೊಂಡು ಆಯ್ಕೆಯಾದ ಸದಸ್ಯರು ಇತ್ತ ನೋಡುತ್ತಿಲ್ಲ. ರಸ್ತೆ ಅಭಿವೃದ್ಧಿಪಡಿಸಿಲ್ಲ.| ಚಂದ್ರಶೇಖರಯ್ಯ ಹಿರೇಮಠ, ಅಯ್ಯಪ್ಪಸ್ವಾಮಿನಗರ ನಿವಾಸಿ