ಹದಗೆಟ್ಟ ಶನಿವಾರಸಂತೆ-ಕುಶಾಲನಗರ ಜಿಲ್ಲಾ ಹೆದ್ದಾರಿ

18ss1Road damege
ಮಾಲಂಬಿ ಕಣಿವೆಬಸವನಹಳ್ಳಿ ಬಳಿ ರಸ್ತೆ ಹದಗೆಟ್ಟಿರುವುದು.
Published on

ಶನಿವಾರಸಂತೆ: ಶನಿವಾರಸಂತೆ-ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ಜಿಲ್ಲಾ ಹೆದ್ದಾರಿ ತೀವ್ರ ಹದಗೆಟ್ಟಿದ್ದು, ಈ ಮಾರ್ಗದಲ್ಲಿ ಸಂಚಾರ ದುಸ್ತರವಾಗಿದೆ.

ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಈ ಮಾರ್ಗವಾಗಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆಯು ಮೈಸೂರು, ಬೆಂಗಳೂರು ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆಯಾಗಿದೆ. 2022 ರಲ್ಲಿ ಗೋಪಾಲಪುರದಿಂದ ಆಲೂರು- ಸಿದ್ದಾಪುರದವರೆಗೆ ತೀರ ಹದಗೆಟ್ಟಿದ್ದ ರಸ್ತೆಯನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು. ಅದರಂತೆ ಹುಣಸೆಕಾಯಿ ಹೊಸಳ್ಳಿಯಿಂದ ಕಣಿವೆಬಸವನಹಳ್ಳಿ ಗ್ರಾಮದವರೆಗೆ ಕಾಮಗಾರಿ ನಡೆಸಲಾಗಿತ್ತು. ಬಳಿಕ ಕಣಿವೆಬಸನಹಳ್ಳಿಯಿಂದ ಮುಂದುವರಿದ ದುರಸ್ತಿ ಕಾಮಗಾರಿ ಸ್ಥಗಿತಗೊಂಡಿತ್ತು.

ಇನ್ನು ಮಾಲಂಬಿಯಿಂದ ಆಲೂರು-ಸಿದ್ದಾಪುರ ಆಸ್ಪತ್ರೆವರೆಗಿನ ರಸ್ತೆಯ ಸ್ಥಿತಿ ಹೇಳತೀರದು. ಸುಮಾರು ಮೂರು ಕಿ.ಮೀ.ವರೆಗೆ ರಸ್ತೆ ಗುಂಡಿಮಯವಾಗಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ನೀರು ರಸ್ತೆ ಮಧ್ಯೆ ಸೇರಿಕೊಂಡು ಹೊಂಡವಾಗುತ್ತದೆ. ಈ ಸಮಯದಲ್ಲಿ ಸವಾರರ ಗೋಳು ಹೇಳತೀರದು.

ಇನ್ನು ಕಣಿವೆಬಸವನಹಳ್ಳಿಯಿಂದ ಮಾಲಂಬಿ ಕೂಡುರಸ್ತೆ ಸ್ಥಿತಿ ದೇವರಿಗೆ ಪ್ರೀತಿ. ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ತೋಟದಿಂದ ಬರುವ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕಣಿವೆಬಸವನಹಳ್ಳಿ ಬಳಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಮುಂದುವರಿಸುವಂತೆ ಸ್ಥಳೀಯರು ಸಂಬಂಧಪಟ್ಟ ಶಾಸರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಅಲ್ಲದೆ ಕಾಮಗಾರಿ ಮುಂದುವರಿಸುವುದಾಗಿ ನೀಡಲಾದ ಭರವಸೆ ಹುಸಿಯಾಗಿದೆ.

ಎರಡು ವರ್ಷದ ಹಿಂದೆ ಶನಿವಾರಸಂತೆ-ಕುಶಾಲನಗರ ಹೆದ್ದಾರಿಯಲ್ಲಿನ ಕಣಿವೆಬಸವನಹಳ್ಳಿ ಗ್ರಾಮದವರೆಗೆ ರಸ್ತೆಯನ್ನು ದುರಸ್ತಿಗೊಳಿಸಲಾಯಿತಾದರೂ ತೀರ ಹದಗೆಟ್ಟಿರುವ ಮಾಲಂಬಿಯಿಂದ ಕೂಡುರಸ್ತೆವರೆಗಿನ ಮಾರ್ಗವನ್ನು ಮಾತ್ರ ದುರಸ್ತಿಗೊಳಿಸಿಲ್ಲ. ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಆದರೆ ಈಗ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು ವಾಹನಗಳಲ್ಲಿ ಸಂಚರಿಸಲು ದುಸ್ತರ ಪಡಬೇಕಾಗಿದೆ.
ಎಂ.ವಿ.ವೆಂಕಟೇಶ್ ಗ್ರಾಪಂ ಮಾಜಿ ಅಧ್ಯಕ್ಷ, ಆಲೂರು- ಸಿದ್ದಾಪುರ ಪಂಚಾಯಿತಿ

ಶನಿವಾರಸಂತೆ-ಕುಶಾಲನಗರ ಹೆದ್ದಾರಿಯಲ್ಲಿನ ಮಾಲಂಬಿ ಬಳಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ರಸ್ತೆ ಬದಿಯ ತೋಟದಿಂದ ಬರುವ ನೀರು ಸಲೀಸಾಗಿ ರಸ್ತೆ ಮಧ್ಯದಲ್ಲಿ ಕಾಲುವೆಯಂತೆ ಹರಿಯುತ್ತದೆ. ಮೊದಲೇ ರಸ್ತೆಯಲ್ಲಿ ಗುಂಡಿಗಳಿದ್ದು, ಈ ನಡುವೆ ಗುಂಡಿಯೊಳಗೆ ನೀರು ತುಂಬಿಕೊಳ್ಳುವುದರಿಂದ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಎಂ.ಜೆ.ದೇವೇಂದ್ರ ಗ್ರಾಮಸ್ಥ, ಮಾಲಂಬಿ

ಕಣಿವೆಬಸವನಹಳ್ಳಿ-ಮಾಲಂಬಿ ಬಳಿ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ಈ ಕುರಿತು ಶಾಸಕರಿಗೆ ಇಲಾಖೆ ವತಿಯಿಂದ ಮನವಿ ನೀಡಲಾಗಿದೆ. ಮಳೆಗಾಲ ಮುಗಿದ ಮೇಲೆ ರಸ್ತೆಯ ದುರಸ್ತಿ ಕಾಮಗಾರಿಯನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು.
ವೆಂಕಟೇಶ್ ನಾಯಕ್, ಮುಖ್ಯ ಕಾರ್ಯಪಾಲಕ ಇಂಜಿನಿಯರ್, ಲೋಕಪಯೋಗಿ ಇಲಾಖೆ, ಸೋಮವಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net