

ಶಿವಮೊಗ್ಗ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಸರ್ಕಾರ, ಗೃಹ ಸಚಿವರು ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದರು. ಇದೀಗ ಹಾನಗಲ್‌ನಲ್ಲಿ ಮಹಿಳೆಯನ್ನು ಬೆದರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ನೈತಿಕ ಪೊಲೀಸ್‌ಗಿರಿ ಹೆಚ್ಚಾಗಿದೆ. ಇದನ್ನು ತಡೆಯಬೇಕಿದ್ದ ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಕಿಡಿಕಾರಿದರು.
ದೆಹಲಿ ಪ್ರವಾಸದ ವೇಳೆ ಕರ್ನಾಟಕದ ರಾಜಕೀಯ ಪರಿಸ್ಥಿತಿಯ ಬಗ್ಗೆ ಮತ್ತು ಪಕ್ಷದಲ್ಲಿ ಸದ್ಯ ಇರುವ ಸಣ್ಣ-ಪುಟ್ಟ ಗೊಂದಲಗಳ ಬಗ್ಗೆ ಗೃಹ ಸಚಿವ ಅಮಿತ್ ಷಾ ಹಾಗೂ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಜತೆಯಲ್ಲಿ ಚರ್ಚಿಸಿದ್ದೇನೆ ಎಂದು ಈಶ್ವರಪ್ಪ ಹೇಳಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಸಿಗದವರು ನಮ್ಮ ವಿರುದ್ಧ ಕೆಲಸ ಮಾಡುತ್ತಿದ್ದಾರೆಂದು ಹೇಳಲಾಗಿದ್ದು ಆ ಬಗ್ಗೆಯೂ ನಾನು ಚರ್ಚೆ ನಡೆಸಿದ್ದೇನೆ. ಅತಿ ಶೀಘ್ರದಲ್ಲಿ ಗಮನ ಹರಿಸುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ ಎಂದರು.
ಚುನಾವಣಾ ರಾಜಕಾರಣದಿಂದ ದೂರ ಸರಿದಿದ್ದ ತನಗೆ ಸಂಘಟನೆಯ ದೃಷ್ಟಿಯಿಂದ ಪಕ್ಷದಲ್ಲಿ ಅಧಿಕಾರವನ್ನು ನೀಡಬೇಕೆಂದು ಕೋಳಿಕೊಂಡಿದ್ದು ಅದರ ಬಗ್ಗೆಯೂ ಚಿಂತಿಸುವುದಾಗಿ ಹಿರಿಯ ನಾಯಕರು ಹೇಳಿದ್ದಾರೆ ಎಂದರು.