ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ

D.20 MDG 1P1
ದೀಪಕ್ ದೊಡ್ಡಯ್ಯ
Published on

ಮೂಡಿಗೆರೆ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರಾಜ್ಯದಲ್ಲಿ ಎರಡೇ ದಿನದಲ್ಲಿ 8 ಕೊಲೆ ನಡೆದಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ದೂರಿದರು.
ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಯಲ್ಲಿ ತೊಡಗಿದ್ದ ಕಾರ್ಯಕರ್ತರ ಮೇಲೆ ಅನ್ಯಕೋಮಿನ ವ್ಯಕ್ತಿ ಕಾರು ಹರಿಸಿರುವುದು, ಹುಬ್ಬಳ್ಳಿಯಲ್ಲಿ ನೇಹ ಎಂಬ ವಿದ್ಯಾರ್ಥಿನಿ ಸೇರಿ 8 ಮಂದಿಯ ಕೊಲೆ ನಡೆದಿದೆ. ಇತ್ತೀಚೆಗೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ, ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ, ಜೈ ಶ್ರೀರಾಮ್ ಎಂದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಿಇಟಿಯಲ್ಲಿ ಪಠ್ಯಕ್ಕೆ ಸಂಬಂಧಪಡದ 46 ಪ್ರಶ್ನೆಗಳನ್ನು ನೀಡಲಾಗಿದೆ. ಹೊಸ ಸ್ವರೂಪದ ಪ್ರಶ್ನೆ ನೋಡಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಬ್ಬಿಬಾಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸರ್ಕಾರ ಸವಾರಿ ನಡೆಸುತ್ತಿದೆ. ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಬಿಟ್ಟರೆ ಜಾರಿಗೊಳಿಸಿರಲಿಲ್ಲ. ಗ್ಯಾರಂಟಿ ಯೋಜನೆಗೂ ಕಾಂಗ್ರೆಸ್ ಸರ್ಕಾರಕ್ಕೂ ಸಂಬಂಧವಿಲ್ಲ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಎಂ.ಗಜೇಂದ್ರ ಮಾತನಾಡಿ, ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಜೆಪಿಯಿಂದ ಒಕ್ಕಲಿಗರಿಗೆ ಅನ್ಯಾಯವಾಗಿದೆ ಎಂದಿದ್ದಾರೆ. ಅವರು ಶಾಸಕರಾಗಿದ್ದ ಅವಧಿಯಲ್ಲಿ ಒಕ್ಕಲಿಗ ಹಾಗೂ ದಲಿತ ಸಮುದಾಯಕ್ಕೆ ಯಾವುದೆ ಕೊಡುಗೆ ನೀಡಿಲ್ಲ. ಹಳ್ಳಿಯಲ್ಲಿದ್ದ ಅವರನ್ನು ಕರೆತಂದು ಮೂರು ಬಾರಿ ಶಾಸಕ ಒಮ್ಮೆ ಜಿಪಂ ಸದಸ್ಯರನ್ನಾಗಿ ಮಾಡಿದ್ದು ಬಿಜೆಪಿ ಎಂಬುದನ್ನು ಅವರು ಮರೆತುಬಿಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಬೇರೆ ಪಕ್ಷಕ್ಕೆ ಹೋಗಿ ಬಿಜೆಪಿಯ ವಿರುದ್ಧ ಮಾತನಾಡುತ್ತಿದ್ದಾರೆ. ಅವರಿಗೆ ಇದು ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಜಿತ್, ಸಚಿನ್, ವಿನಯ್ ಹಳೆಕೋಟೆ, ಕೊಣಗೆರೆ ಸುಂದರೇಶ್, ನಯನ ತಳವಾರ, ದನಿಕ್ , ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net