ಹದಗೆಟ್ಟ ಕಾರ್ನಾಡು ಬೈಪಾಸ್ ಸಂಪರ್ಕ ರಸ್ತೆ : ಸಂಚಾರ ದುಸ್ತರ ಸ್ಥಳೀಯರಿಂದ ಪ್ರತಿಭಟನೆ ಎಚ್ಚರಿಕೆ

New Project (24)
Published on

ಮೂಲ್ಕಿ: ನಗರದ ಕಾರ್ನಾಡ್ ಪೇಟೆಯಿಂದ ಕಾರ್ನಾಡು ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ 66ನ್ನು ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ.

ಸಾವಿರಾರು ವಾಹನಗಳು ಓಡಾಡುತ್ತಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆ ಸಂಪೂರ್ಣ ಹಾಳಾಗಿದ್ದು ಮಳೆಗಾಲದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ರಸ್ತೆ ಹೊಂಡ ಗುಂಡಿಗಳಿಂದ ಕೂಡಿದೆ.

ಈ ರಸ್ತೆಯಲ್ಲಿ ಹರಿಹರ ಕ್ಷೇತ್ರದ ಎದುರು ಭಾಗದಿಂದ ಧರ್ಮಸ್ಥಾನದ ದ್ವಾರದವರೆಗೆ, ಭಾರಿ ಮಳೆಗೆ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಉಂಟಾಗಿ ಅಪಾಯಕಾರಿಯಾಗಿ ಪರಿಣಮಿಸಿದೆ.

ಕಳೆದ ಮಳೆಗಾಲದಲ್ಲಿ ಕೂಡ ರಸ್ತೆ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ತೇಪೆ ಕಾಮಗಾರಿ ನಡೆಸಲಾಗಿತ್ತು. ತೇಪೆ ಕಾಮಗಾರಿ ಬಗ್ಗೆ ಸ್ಥಳೀಯ ನಗರ ಪಂಚಾಯಿತಿ ಸದಸ್ಯ ಹರ್ಷರಾಜ ಶೆಟ್ಟಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ತೇಪೆ ಮೊದಲ ಮಳೆಗೆ ಕೊಚ್ಚಿ ಹೋಗಿದ್ದು ಪುನಃ ರಸ್ತೆ ಹಾಳಾಗಿದೆ.

ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಶರತ್ ಕಾರ್ನಾಡ್ ಮಾತನಾಡಿ, ದಿನವೊಂದಕ್ಕೆ ಸಾವಿರಾರು ವಾಹನಗಳು ಓಡಾಡುವ ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಗೆ ಕಾಯಕಲ್ಪ ನೀಡಲು ಇಲಾಖೆ ನಿರ್ಲಕ್ಷೃ ವಹಿಸಿದೆ. ಮೂರು ನಾಲ್ಕು ವರ್ಷಗಳಿಂದ ಪ್ರತಿ ಮಳೆಗಾಲದಲ್ಲಿ ರಸ್ತೆ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಕಾಂಕ್ರಿಟೀಕರಣದ ಮೂಲಕ ರಸ್ತೆ ಪೂರ್ಣ ಪ್ರಮಾಣದ ಶಾಶ್ವತ ದುರಸ್ತಿಗೆ ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net