

ಚಾಮರಾಜನಗರ: ಗುಂಡ್ಲುಪೇಟೆ ಪಟ್ಟಣದ ಜಾಕೀರ್‌ಹುಸೇನ್ ಬಡಾವಣೆಯಲ್ಲಿ ವೈಯಕ್ತಿಕ ದ್ವೇಷ, ಹಣಕಾಸಿನ ವಿಚಾರ, ಅಕ್ರಮ ಗೋಸಾಗಣೆಯ ಘರ್ಷಣೆಯಿಂದಾಗಿ ಮೂವರನ್ನು ಕೊಲೆ ಮಾಡಿ ರಕ್ತದ ಓಕುಳಿ ಹರಿಸಿದ್ದ 15 ಜನ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೇ 26ರಂದು ರಾತ್ರಿ 8.20ರಲ್ಲಿ ಬಡಾವಣೆಯ ಜಕಾವುಲ್ಲಾ(30), ಖೈಸರ್(29), ಇದ್ರೀಸ್(30) ಕೊಲೆಯಾಗಿತ್ತು. ಆರೋಪಿಗಳಾದ ನಸ್ರುಲ್ಲಾ, ಉಮರ್, ಸಲೀಂ, ಹಜು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪದಡಿ ಅನ್ಸು, ಅಸ್ಲಾಂಪಾಷ, ಇಕ್ರಂಪಾಷ, ಅನೀಷ್‌ಪಾಷ, ಸಮೀರ್, ಇನಾಯತ್, ಅನ್ವರ್‌ಪಾಷ, ಏಜಾಸ್‌ಪಾಷ, ಮುದಸ್ಸಿರ್, ಫಾರೂಕ್, ಸುಹೇಲ್‌ಪಾಷ, ಇಂತಿಯಾಜ್, ಅಲ್ತಾಪ್‌ಪಾಷ, ಮುಜಾಯಿಲ್, ಅಮ್ಜಾತ್‌ಪಾಷ ಅವರನ್ನು ಬಂಧಿಸಲಾಗಿದೆ. ಉಳಿದ ಮೂವರು ಆರೋಪಿಗಳ ಹೆಸರನ್ನು ಬಹಿರಂಗಪಡಿಸದೆ ಸೆರೆ ಹಿಡಿಯಲು ಬಲೆ ಬೀಸಲಾಗಿದೆ.
ಕೊಲೆ ಮಾಡಿ ದಿಕ್ಕಾಪಾಲಾಗಿದ್ದ ಆರೋಪಿಗಳು.
ರಂಜಾನ್ ಹಬ್ಬದ ಮರುದಿನ ನಡೆದಿದ್ದ ತ್ರಿವಳಿಕೊಲೆ ಪ್ರಕರಣದ ಹಿನ್ನೆಲೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ 198/2020 143, 147, 148, 302,307, 504 ರೆ/ವಿ 149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು. ಕೃತ್ಯದಲ್ಲಿ ಭಾಗಿಯಾಗಿ ಮೈಸೂರು, ಕೊಳ್ಳೇಗಾಲದ ಅಜ್ಜೀಪುರ, ಊಟಿ ಸೇರಿ ದಿಕ್ಕಾಪಾಲಾಗಿದ್ದ 15 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್‌ಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದರಿ ಪ್ರಕರಣವು ಇನಾಯತ್ (ಆರೋಪಿ ಸಂಖ್ಯೆ 6) ಮತ್ತು ನೂರುಲ್ಲಾ ನಡುವಿನ ಗುಂಪು ಘರ್ಷಣೆಯಾಗಿದೆ. ಇನಾಯತ್ ಕಡೆಯ ಆರೋಪಿಗಳ ಗುಂಪು ನೂರಲ್ಲಾ ಮತ್ತು ಕಡೆಯವರ ಜತೆ ಜಗಳವಾಡುತ್ತಿದ್ದರು. ಈ ವೇಳೆ ಗಲಾಟೆ ತಾರಕಕ್ಕೇರಿ ಆರೋಪಿಗಳು ಕಾರಿನಲ್ಲಿದ್ದ ಮಚ್ಚು, ಲಾಂಗು, ಸತ್ತಾರ್ ಮತ್ತು ಚಾಕುಗಳನ್ನು ತಂದು ಜಕಾವುಲ್ಲಾ, ಖೈಸರ್, ಇದ್ರೀಸ್, ನಸ್ರುಲ್ಲಾ, ಉಮರ್, ಸಲೀಂ ಮತ್ತು ಹಜು ಅವರ ತಲೆ, ಮೈಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರ ಗಾಯಗೊಂಡಿದ್ದ ಜಕಾವುಲ್ಲಾ, ಖೈಸರ್, ಇದ್ರೀಸ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟರು ಎಂದು ಎಸ್‌ಪಿ ವಿವರಿಸಿದರು.
ಪ್ರಕರಣದಡಿ 18 ಆರೋಪಿಗಳು ಭಾಗಿಯಾಗಿರುವುದಾಗಿ ಮುಜೀಬುಲ್ ರೆಹಮಾನ್ ನೀಡಿದ ದೂರು ದಾಖಲು ಮಾಡಿಕೊಂಡು ಇದನ್ನು ಘೋರ ಮತ್ತು ಗಂಭೀರ ಸ್ವರೂಪದ ಪ್ರಕರಣವೆಂದು ಪರಿಗಣಿಸಿದ ಎಸ್‌ಪಿ ಚಾ.ನಗರ ಡಿವೈಎಸ್ಪಿಗೆ ತನಿಖೆ ಜವಾಬ್ದಾರಿ ವಹಿಸಿದ್ದರು. ತನಿಖೆಯ ತೀವ್ರತೆಯನ್ನು ಮನಗಂಡು ಎಎಸ್‌ಪಿ ಅನಿತಾ ಹದ್ದಣ್ಣವರ್ ಅವರಿಗೆ ವಹಿಸಲಾಗಿತ್ತು. ಜತೆಗೆ 4 ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸದರಿ ಪ್ರಕರಣವನ್ನು ಭೇದಿಸಿದ 20 ಜನ ಪೊಲೀಸರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್‌ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಅಣ್ಣ ತಮ್ಮಂದಿರು ಇದ್ದಾರೆ!
ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಸ್ತಗಿರಿ ಮಾಡಿರುವ 15 ಜನ ಆರೋಪಿಗಳಲ್ಲಿ ಸ್ವಂತ ಅಣ್ಣ-ತಮ್ಮಂದಿರು, ಕುಟುಂಬದ ಸಂಬಂಧಿಕರೇ ಇದ್ದಾರೆ. ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ 67 ವರ್ಷ ವಯಸ್ಸಿನ ಅಮ್ಜಾತ್‌ಪಾಷ, ಅಸ್ಲಾಂಪಾಷ (44), ಅಲ್ತಾಫ್‌ಪಾಷ(40), ಸಮೀರ್ (40) ಆರೋಪಿಗಳು ಭಾಗಿಯಾಗಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಇವರೆಲ್ಲರಿಗೂ ಕೋವಿಡ್-19 ಪರೀಕ್ಷೆ ನಡೆಸಲಾಗುವುದು ಮತ್ತು ತನಿಖೆ ಮುಂದುವರೆಯುವುದು ಎಂದು ಎಸ್ಪಿ ಆನಂದ್‌ಕುಮಾರ್ ತಿಳಿಸಿದ್ದಾರೆ.
ಕೊಲೆ ತನಿಖೆಯ ಜತೆಗೆ ಜಾಕೀರ್ ಹುಸೇನ್ ನಗರದಲ್ಲಿ ಕೊಳ್ಳೇಗಾಲ ಡಿವೈಎಸ್ಪಿ ನವೀನ್‌ಕುಮಾರ್ ನೇತೃತ್ವದಲ್ಲಿ ಪೊಲೀಸರ ತಂಡ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದೆ. ಹಗಲು ರಾತ್ರಿ ಎರಡು ಪಾಳಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಗುಂಡ್ಲುಪೇಟೆಯಲ್ಲಿ ಶಾಂತಿ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೊಲೆಗೆ ಕಾರಣವೇನು? : ಇನಾಯತ್ ಮತ್ತು ನೂರುಲ್ಲಾ ಗುಂಪಿನ ನಡುವೆ ಹಲವು ವರ್ಷಗಳ ಹಿಂದೆಯೇ ಗಲಾಟೆ ನಡೆದಿತ್ತು. ಈ ವೇಳೆ ಒಬ್ಬನ ಮೇಲೆ (307 ಪ್ರಕರಣ) ಮಾರಣಾಂತಿಕ ಹಲ್ಲೆ ನಡೆದಿತ್ತು. ಹಲ್ಲೆಗೊಳಾಗಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅಲ್ಲಿಂದ ತಾರಕ್ಕೇರಿದ ಇಬ್ಬರ ನಡುವಿನ ಕದನದಲ್ಲಿ ಮೈಕ್ರೋ ಫೈನಾನ್ಸ್, ಡಾಬಾ ಮಾದರಿಯ ಹೋಟೆಲ್ ವ್ಯವಹಾರದಲ್ಲಿ ವೈಷಮ್ಯ ಬೆಳೆಸಿಕೊಂಡಿದ್ದರು. ಜತೆಗೆ ಗೋವುಗಳ ಅಕ್ರಮ ಸಾಗಣೆ ವಿಚಾರದಲ್ಲೂ ಈ ಗುಂಪುಗಳ ನಡುವೆ ಕಿತ್ತಾಟ ನಡೆದಿತ್ತು. ಹಾಗಾಗಿ, ಇಬ್ಬರ ನಡುವಿನ ದ್ವೇಷ ತಾರಕಕ್ಕೇರಿ ಮೂವರ ಕೊಲೆ, ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುವವರೆಗೂ ಹೋಗಿದೆ.
ತ್ರಿವಳಿ ಕೊಲೆ ಮೇ 26ರಂದು ರಾತ್ರಿ 8.30ಕ್ಕೆ ಜರುಗಿದೆ. ಪೊಲೀಸರಿಗೆ 9.15ಕ್ಕೆ ಪ್ರಕರಣ ನಡೆದಿರುವ ಬಗ್ಗೆ ಗೊತ್ತಾಗಿದೆ. ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಮೊದಲೇ ಗೊತ್ತಿದ್ದೂ ಹೋಗಿ ತಡೆಯಲು ವಿಫಲರಾಗಿರುವುದು ಕಂಡುಬಂದಲ್ಲಿ ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಕೃತ್ಯ ನಡೆದ ವೇಳೆ ಮನೆಯೊಂದಕ್ಕೆ ಬೆಂಕಿ ಹಚ್ಚಿದ್ದ ಸಂಬಂಧ ಪ್ರಕರಣ ದಾಖಲಾಗಿದೆ. ತನಿಖೆಗೆ ಪೂರ್ಣ ಪ್ರಮಾಣದ ವಾತಾವರಣ ಸೃಷ್ಟಿಸಿಕೊಡುವ ಉದ್ದೇಶದಿಂದ ಪೊಲೀಸ್ ಒಬ್ಬರನ್ನು ವರ್ಗಾವಣೆ ಮಾಡಲಾಗಿದೆ.
> ಎಚ್.ಡಿ.ಆನಂದ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ.