

ಮಡಿಕೇರಿ: ಮೈಸೂರಿನಿಂದ ಗಾಂಜಾ ತಂದು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಹೆಬ್ಬಾಳು ನಿವಾಸಿ ಆನಂದ(45), ವಿರಾಜಪೇಟೆಯ ಮೊಗರಗಲ್ಲಿ ನಿವಾಸಿ ಖಲೀಲ್(34), ಸೋಮವಾರಪೇಟೆ ತಾಲೂಕಿನ ವಾಲ್ನೂರು ಗ್ರಾಮದ ಕೆ.ಎಸ್.ಫರೀದ್(53), ಅಭ್ಯತ್‌ಮಂಗಲದ ಎಚ್.ಎನ್.ನಿಖಿಲ್(27), ಎಚ್.ಎಸ್.ಹರೀಶ್(34) ಮತ್ತು ಚೆಟ್ಟಳ್ಳಿಯ ಕೆ.ಎನ್.ಅರುಣ್‌ಕುಮಾರ್(29) ಬಂಧಿತ ಆರೋಪಿಗಳು.
ಪ್ರಮುಖ ಆರೋಪಿ ಆನಂದ ಮೈಸೂರಿನಿಂದ ಅಕ್ರಮವಾಗಿ ಗಾಂಜಾ ತಂದು ಕೊಡಗು ಜಿಲ್ಲೆಯ ವಿತರಕರಿಗೆ ಹಂಚುತ್ತಿದ್ದನು. ಉಳಿದ ಆರೋಪಿಗಳು ಅದನ್ನು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದರು.
ಅಂತೆಯೆ, ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದ ಸಮೀಪ ಆನಂದ ಇತರ ಆರೋಪಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭ ಅಪರಾಧ ಪತ್ತೆದಳ ಹಾಗೂ ಮಡಿಕೇರಿ ಉಪವಿಭಾಗ ಪೊಲೀಸರು ದಾಳಿ ನಡೆಸಿದರು. ಈ ವೇಳೆ 5 ಕೆ.ಜಿ. ಗಾಂಜಾ, 5 ಸಾವಿರ ರೂ. ನಗದು, ಒಂದು ಕಾರು, ಆಟೋರಿಕ್ಷಾ ಹಾಗೂ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪನ್ನೇಕರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದು ತಿಂಗಳ ಹಿಂದೆಯಷ್ಟೇ ಮೈಸೂರಿನಿಂದ ಗಾಂಜಾ ತಂದು ಕೊಡಗಿನಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದರು. ಇದೀಗ ಮತ್ತೊಂದು ಪ್ರಕರಣವನ್ನು ಪತ್ತೆಹಚ್ಚಿರುವ ಪೊಲೀಸರು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಪ್ರತ್ಯೇಕ ತಂಡಗಳು ಕಾರ್ಯನಿರ್ವಹಿಸಿದ್ದವು. ಆದರೆ ಮೊದಲ ಪ್ರಕರಣದಲ್ಲಿದ್ದ ಒಬ್ಬ ಆರೋಪಿಯ ಸಹೋದರ ಈ ಗುಂಪಿನಲ್ಲಿದ್ದನೆಂದು ಎಸ್ಪಿ ಮಾಹಿತಿ ನೀಡಿದರು.
ಡಿವೈಎಸ್ಪಿ ಬಿ.ಪಿ.ದಿನೇಶ್‌ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ಸಿ.ಎನ್.ದಿವಾಕರ್, ಪಿಎಸ್‌ಐಗಳಾದ ಎಚ್.ವಿ.ಚಂದ್ರಶೇಖರ್, ಸದಾಶಿವ, ಎನ್.ಕುಮಾರ್ ಆರಾಧ್ಯ, ಸಿಬ್ಬಂದಿ ಹಮೀದ್, ಅನಿಲ್, ಶರತ್ ರೈ, ನಿರಂಜನ್, ಯೋಗೇಶ್, ವಸಂತ, ವೆಂಕಟೇಶ್, ಶಶಿಕುಮಾರ್, ಶ್ರೀಧರ್ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
.ಡಿವೈಎಸ್ಪಿ ಬಿ.ಪಿ.ದಿನೇಶ್‌ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಐ ಸಿ.ಎನ್.ದಿವಾಕರ್, ಪಿಎಸ್‌ಐಗಳಾದ ಎಚ್.ವಿ.ಚಂದ್ರಶೇಖರ್, ಸದಾಶಿವ, ಎನ್.ಕುಮಾರ್ ಆರಾಧ್ಯ, ಸಿಬ್ಬಂದಿ ಹಮೀದ್, ಅನಿಲ್, ಶರತ್ ರೈ, ನಿರಂಜನ್, ಯೋಗೇಶ್, ವಸಂತ, ವೆಂಕಟೇಶ್, ಶಶಿಕುಮಾರ್, ಶ್ರೀಧರ್ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಯಾಚರಣೆ ಮುಂದುವರಿಯಲಿದೆ. ಇದರಿಂದ ಗಾಂಜಾ ಸೇವನೆ ಮಾಡುವವರಿಗೂ ಆಪತ್ತಾಗಬಹುದು.
ಸುಮನ್ ಡಿ.ಪನ್ನೇಕರ್, ಎಸ್ಪಿ