ಐದು ವರ್ಷದ ಹಿಂದೆ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾಗಿದ್ದವಳ ಬಂಧನ!

28-ALN-1
Published on

ಅಳ್ನಾವರ: 5 ಐದು ವರ್ಷಗಳ ಹಿಂದೆ ಪತಿ ಹಾಗೂ ಇಬ್ಬರು ಪುತ್ರರನ್ನು ಬಿಟ್ಟು ಪರಾರಿಯಾಗಿದ್ದ ಗೃಹಿಣಿ ಮತ್ತು ಪ್ರಿಯಕರನನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ. ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಜಾಡು ಹಿಡಿದ ಪೊಲೀಸರು ಆಂಧ್ರ ಪ್ರದೇಶದ ಸಂಗಾರೆಡ್ಡಿ ಜಿಲ್ಲೆಯ ಪಟ್ಟಣಚೆರು ಎಂಬಲ್ಲಿ ಇಬ್ಬರನ್ನು ಬಂಧಿಸಿ ಕರೆ ತಂದಿದ್ದಾರೆ.

ಆದರೆ, ನೀತಾ ತಾನು ಪ್ರೀತಿಸಿದ ಅಭಿಷೇಕನೊಂದಿಗೆ ವಿವಾಹವಾಗುತ್ತೇನೆ ಹಾಗೂ ಪತಿ ಮಂಜುನಾಥನಿಗೆ ವಿಚ್ಛೇದನ ನೀಡುವುದಾಗಿ ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದಾಳೆ. ಕಾರ್ಯಾಚರಣೆಯಲ್ಲಿ ಸ್ಥಳೀಯ ಪಿಎಸ್​ಐ ಶಿವಪ್ಪ ಕಣವಿ, ನಾಗರಾಜ ಹಾಲವರ, ಮಹಾಂತೇಶ ಮದ್ದಿನ ಇದ್ದರು.

ಘಟನೆಯ ಹಿನ್ನಲೆ: ಪಟ್ಟಣದ ಆಜಾದ್ ರಸ್ತೆಯಲ್ಲಿ ಹೋಟೆಲ್ ವ್ಯಾಪಾರ ನಡೆಸುತ್ತಿದ್ದ ಮಂಜುನಾಥ ಬಿ. ಪೈ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ನೀತಾಳನ್ನು 2007ರಲ್ಲಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಪುತ್ರರು ಇದ್ದಾರೆ. ಇವರ ಹೋಟೆಲ್ ಪಕ್ಕದಲ್ಲಿ ಇಲೆಕ್ಟ್ರಾನಿಕ್ ವಸ್ತುಗಳ ಅಂಗಡಿ ನಡೆಸುತ್ತಿದ್ದ ಅಭಿಷೇಕ ಶಾಂತಿನಾಥ ಬೋಗಾರನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದರು. ಈ ವೇಳೆ ನೀತಾ ಅಭಿಷೇಕನನ್ನು ಪ್ರೀತಿಸಿ 2015ರ ಡಿಸೆಂಬರ್ 12ರಂದು ಓಡಿ ಹೋಗಿದ್ದಳು. ಈ ಬಗ್ಗೆ ಮಂಜುನಾಥ ಪೈ ಪೊಲೀಸ್ ಠಾಣೆಗೆ ದೂರು ನೀಡಿ, ತನ್ನ ಪತ್ನಿಯನ್ನು ಅಭಿಷೇಕ ಒತ್ತಾಯಪೂರ್ವಕವಾಗಿ ಓಡಿಸಿಕೊಂಡು ಹೋಗಿದ್ದಾನೆ ಎಂದು ತಿಳಿಸಿದ್ದರು.

ತನಿಖೆ ನಡೆಸಿದ ಪೊಲೀಸರು ಆಂಧ್ರಪ್ರದೇಶದಿಂದ ಪ್ರೇಮಿಗಳನ್ನು ಕರೆತಂದಿದ್ದಾರೆ. ಈ ವೇಳೆ ಮಂಜುನಾಥ ಮಕ್ಕಳೊಂದಿಗೆ ಮಾತನಾಡುವಂತೆ ನೀತಾಳಲ್ಲಿ ಕೇಳಿಕೊಂಡರೂ ಆಕೆ ನಿರಾಕರಿಸಿದ್ದಾಳೆ. ಪ್ರತಿಯಾಗಿ ‘ನಾನು ಪ್ರೀತಿಸಿರುವ ಅಭಿಷೇಕನೊಂದಿಗೆ ಜೀವನ ನಡೆಸುತ್ತೇನೆ. ಪತಿ ಮಂಜುನಾಥನಿಗೆ ವಿಚ್ಛೇದನ ನೀಡುತ್ತೇನೆ’ ಎಂದು ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದಾಳೆ. ಹೀಗಾಗಿ ಪೊಲೀಸರು ಅಭಿಷೇಕನೊಂದಿಗೆ ನೀತಾಳನ್ನು ಕಳುಹಿಸಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net