ಕಿಡ್ನಿ ಮಾರಾಟ ಹೆಸರಲ್ಲಿ ವಂಚಿಸುತ್ತಿದ್ದವನ ಬಂಧನ

Arrest
Published on

ಬೆಂಗಳೂರು: ಕಿಡ್ನಿ ಮಾರಾಟ ಮತ್ತು ಖರೀದಿಸುವುದಾಗಿ ಅಮಾಯಕರಿಗೆ ಆಮಿಷವೊಡ್ಡಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕ್ಯಾಮರೂನ್ ದೇಶದ ತಹ ಬ್ವೇರ್ಕಾ ಜಾಫ್ ಬಂಧಿತ. ಆರೋಪಿಯಿಂದ ವೀಸಾ, ಪಾಸ್​ಪೋರ್ಟ್ ಹಾಗೂ 5 ಮೊಬೈಲ್, ಸಿಮ್​ಕಾರ್ಡ್, 2 ಪೆನ್​ಡ್ರೖೆವ್, 1 ಲ್ಯಾಪ್​ಟಾಪ್ ಮತ್ತು 2 ಎಟಿಎಂ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಮನಗರ, ಬೆಳ್ಳಂದೂರು ಹಾಗೂ ಕೇರಳ, ತಮಿಳುನಾಡಿನಲ್ಲಿ ವಂಚಿಸಿದ್ದ. ಈ ಕುರಿತು ಪ್ರಕರಣ ದಾಖಲಿಸಲಾಗಿತ್ತು. ಆರೋಪಿಯ ವೆಬ್​ಸೈಟ್ ಮೇಲೆ ನಿಗಾ ವಹಿಸಲಾಗಿತ್ತು. ಗ್ರಾಹಕರ ಸೋಗಿನಲ್ಲಿ ಸಂರ್ಪಸಿ, ಆತನ ಪೋನ್ ನಂಬರ್ ಲೋಕೇಷನ್ ಆಧರಿಸಿ ತನಿಖೆ ಕೈಗೊಂಡಾಗ ಬಾಗಲೂರಿನಲ್ಲಿ ಇರುವ ಸುಳಿವು ಸಿಕ್ಕಿತ್ತು.

ಕೂಡಲೇ ಕಾರ್ಯಾಚರಣೆ ನಡೆಸಿ ಬಾಗಲೂರಿನ ಬಾಡಿಗೆ ಮನೆಯೊಂದರಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಪ್ರವಾಸಿ ವೀಸಾದಡಿ ಬಂದು, ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ನಕಲಿ ವೆಬ್​ಸೈಟ್​ಗಳನ್ನು ಸೃಷ್ಟಿಸಿಕೊಂಡು ಅಮಾಯಕರನ್ನು ಸೆಳೆಯುತ್ತಿದ್ದ. ವೆಬ್​ಸೈಟ್​ನಲ್ಲಿ ಕಿಡ್ನಿ ಮಾರಾಟ ಮತ್ತು ಖರೀದಿ ಮಾಡುತ್ತೇನೆ. ಅಲ್ಲದೆ, ಕಡಿಮೆ ಬೆಲೆಗೆ ಹಸು ಕೊಡಿಸುವುದಾಗಿ ಜಾಹೀರಾತು ಪ್ರಕಟಿಸುತ್ತಿದ್ದ. ಜಾಹೀರಾತಿನಲ್ಲಿದ್ದ ಫೋನ್ ನಂಬರ್ ಗಮನಿಸಿ ಕರೆ ಮಾಡುತ್ತಿದ್ದ ಜನರಿಗೆ, ಕಿಡ್ನಿ ಮಾರಾಟ ಮಾಡಿದರೆ 4 ಕೋಟಿ ರೂ. ಸಿಗುತ್ತದೆ ಎಂದು ಆಮಿಷವೊಡ್ಡುತ್ತಿದ್ದ. ಖರ್ಚು ವೆಚ್ಚಗಳಿಗೆಂದು ಹೇಳಿ ಲಕ್ಷಾಂತರ ರೂ. ಬ್ಯಾಂಕ್ ಖಾತೆಗೆ ಸಂದಾಯ ಮಾಡಿಸಿಕೊಂಡು ಸಂಪರ್ಕಕ್ಕೆ ಸಿಗದೇ ವಂಚಿಸುತ್ತಿದ್ದ. ಈ ಕುರಿತು ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net