ಪತ್ತೆದಾರರಿಗೆ ಕಾನೂನಿನ ಚೌಕಟ್ಟು ಅಗತ್ಯ: ಎಐಡಿ ಒತ್ತಾಯ

Published on

ಬೆಂಗಳೂರು: ಖಾಸಗಿ ತನಿಖಾ ಸಂಸ್ಥೆಗಳು ಮತ್ತು ಪತ್ತೆದಾರರ ಚಟುವಟಿಕೆಗಳನ್ನು ಸರ್ಕಾರ ಕಾನೂನು ಚೌಕಟ್ಟಿನೊಳಗೆ ತರಬೇಕು. ಸಾಂವಿಧಾನಿಕ ರಕ್ಷಣೆ ಇದ್ದಲ್ಲಿ ಇನ್ನಷ್ಟು ಮಂದಿ ಆತ್ಮವಿಶ್ವಾಸದಿಂದ ಈ ಕ್ಷೇತ್ರಕ್ಕೆ ಬರಲು ಸಾಧ್ಯವಿದೆ ಎಂದು ತನಿಖೆ ಮತ್ತು ಪತ್ತೆದಾರರ ಒಕ್ಕೂಟದ(ಎಐಡಿ) ಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಸುರೇಂದ್ರ ವಿ. ಜಗ್ಗ ಹೇಳಿದರು.
ನಗರದಲ್ಲಿ ಇತ್ತೀಚೆಗೆ ನಡೆದ ಎರಡು ದಿನಗಳ ‘ಶ್ರೀಪುರುಷ ತರಬೇತಿ ಮತ್ತು ವಿಚಾರ ಸಂಕಿರಣ’ದಲ್ಲಿ ಮಾತನಾಡಿದರು.
ಕಾರ್ಪೊರೇಟ್ ವಲಯದಲ್ಲಿ ತನಿಖಾ ಸಂಸ್ಥೆಗಳಿಗೆ ಭಾರಿ ಬೇಡಿಕೆ ಇದೆ. ಆದರೆ ಇದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲದಿರುವುದರಿಂದ ಅನೇಕರು ಆಸಕ್ತಿ ಮತ್ತು ಸಾಮರ್ಥ್ಯವಿದ್ದರೂ ಈ ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ದೇಶದಲ್ಲಿ ಪ್ರಸ್ತುತ ಐದು ಸಾವಿರಕ್ಕೂ ಹೆಚ್ಚು ಪತ್ತೆದಾರರು ಮತ್ತು ಖಾಸಗಿ ತನಿಖಾ ಸಂಸ್ಥೆಗಳಿವೆ. ಬೇಡಿಕೆಗಿಂತ ಇದು ಕಡಿಮೆಯೇ ಎಂದರು.
ಸಾಮಾಜಿಕ ರೀತಿನೀತಿಗಳು, ಆರ್ಥಿಕ ಚಟುವಟಿಕೆಗಳು ಬದಲಾಗುತ್ತಿರುವಂತೆ ಅಪರಾಧ ಸ್ವರೂಪಗಳೂ ಬದಲಾಗುತ್ತಿವೆ. ತ್ವರಿತವಾಗಿ ಬದಲಾಗುವ ತಂತ್ರಜ್ಞಾನದಿಂದಾಗಿ ಅಪರಾಧಗಳೂ ಹೊಸ ರೂಪ ಪಡೆಯುತ್ತಿವೆ. ಹಾಗಾಗಿ ತನಿಖಾ ಸಂಸ್ಥೆಗಳೂ ಅಷ್ಟೇ ವೇಗವಾಗಿ ಹೊಸತನಕ್ಕೆ ತೆರೆದುಕೊಳ್ಳಬೇಕು. ಖಾಸಗಿ ತನಿಖಾ ಸಂಸ್ಥೆಗಳ ಮತ್ತು ಪತ್ತೆದಾರರ ಬಲ ಹೆಚ್ಚಿಸಲು ಮತ್ತು ಅವರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಎಐಡಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಎಲ್ಲ ಹಂತಗಳಲ್ಲಿಯೂ ಅವರಿಗೆ ಅಗತ್ಯ ನೆರವು ನೀಡುತ್ತಿದೆ ಎಂದು ತಿಳಿಸಿದರು.
ಎಐಡಿ ಆಶ್ರಯದಲ್ಲಿ ನಡೆದ ಈ ವಿಚಾರಗೋಷ್ಠಿಯಲ್ಲಿ ಭಾರತದಾದ್ಯಂತ ನೂರಕ್ಕೂ ಹೆಚ್ಚು ಖಾಸಗಿ ತನಿಖಾಸಂಸ್ಥೆಗಳ ಪ್ರತಿನಿಧಿಗಳು ಮತ್ತು ಪತ್ತೆದಾರರು ಭಾಗವಹಿಸಿದ್ದರು. ತನಿಖಾ ಸಂಸ್ಥೆಗಳ ಸಬಲೀಕರಣಕ್ಕಾಗಿ ಹೊಸ ಪ್ರಯತ್ನಗಳನ್ನು ರೂಪಿಸುವ ನಿರ್ಣಯವನ್ನು ವಿಚಾರ ಸಂಕಿರಣದಲ್ಲಿ ಸ್ವೀಕರಿಸಲಾಯಿತು. ಸೈಬರ್ ಅಪರಾಧದ ಬಗ್ಗೆ ವಿಚಾರ ಸಂಕಿರಣ ಬೆಳಕು ಚೆಲ್ಲಿತು.
ಎಐಡಿ ಕಾರ್ಯದರ್ಶಿ ತುಷಾರ್ ವಿಶ್ವಕರ್ಮ, ಸ್ಥಾಪಕ ನಿರ್ದೇಶಕ ಆಶಿಷ್ ದೇಸಾಯಿ, ಆಡಳಿತಾಧಿಕಾರಿ ಸಿದ್ಧಿದಾ ಮೋರೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net