

ಚಿತ್ರದುರ್ಗ: ಅಬಕಾರಿ ಇಲಾಖೆ, ನಗರದ ಹೊರವಲಯ ದ್ಯಾಮವ್ವನಹಳ್ಳಿ ಘನ ತ್ಯಾಜ್ಯವಸ್ತುಗಳ ವಿಲೇವಾರಿ ಹಾಗೂ ಸಂಸ್ಕರಣಾ ಘಟಕದಲ್ಲಿ ಲಕ್ಷಾ ಂತರ ರೂ. ಮೌಲ್ಯದ ಗಾಂಜಾವನ್ನು ಸೋಮವಾರ ನಾಶ ಪಡಿಸಿತು.
ಇಲಾಖೆ ಹೊಸಪೇಟೆ ವಿಭಾಗದ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಸಿ.ಎಚ್.ಬಾಲಕೃಷ್ಣ ನೇತೃತ್ವದಲ್ಲಿ ಅಂದಾಜು 20 ಲಕ್ಷ ರೂ. ಮೌಲ್ಯದ ಹಸಿ ಮತ್ತು ಒಣ ಗಾಂಜಾವನ್ನು ಸುಡಲಾಯಿತು.
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಬಾಲಕೃಷ್ಣ, ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳಲ್ಲಿ 2015ರಿಂದ 2021 ರವರೆಗೆ ವಿವಿಧ 43 ಪ್ರಕರಣಗಳಲ್ಲಿ ಅಬಕಾರಿ ಇಲಾಖೆ 164 ಕೆ.ಜಿ.ಗಾಂಜಾ (52 ಕೆಜಿ ಹಸಿ, 112 ಕೆಜಿ ಒಣ) ವಶಪಡಿಸಿಕೊಂಡಿತ್ತು.
ರಾಸಾಯನಿಕ ಪರೀಕ್ಷೆಗೆ ಬಳಸಿದ ಗಾಂಜಾ ಹೊರತು ಪಡಿಸಿ 97 ಕೆಜಿ ಹಸಿ ಮತ್ತು ಒಣ ಗಾಂಜಾವನ್ನು ನಾಶ ಪಡಿಸಲಾಗಿದೆ. ಅಫೀಮ್ ವಶಪಡಿಸಿಕೊಂಡಿರುವ ಪ್ರಕರಣವೂ ದಾಖಲಾಗಿದ್ದು, ಕೋರ್ಟ್ ಅನುಮತಿ ಬಳಿಕ ಅದನ್ನೂ ನಾಶ ಮಾಡಲಾಗುವುದು ಎಂದು ಹೇಳಿದರು.
ಅನ್ಯ ರಾಜ್ಯಗಳಿಂದ ಚಿತ್ರದುರ್ಗ ಜಿಲ್ಲೆ ಮೂಲಕ ಗಾಂಜಾ ಸಾಗಿಸುವ ಕುರಿತು ಮಾಹಿತಿ ಇದೆ. ಅತಿ ಹೆಚ್ಚು ಗಾಂಜಾವನ್ನು ನಮ್ಮ ಇಲಾಖೆ ವಶಪಡಿಸಿಕೊಂಡಿದೆ. ಹೆದ್ದಾರಿಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ. ಅಬಕಾರಿ ಅಧಿಕಾರಿ, ಸಿಬ್ಬಂದಿ ಹುದ್ದೆಗಳು ಭರ್ತಿ ಆಗಬೇಕಿವೆ. ಜಿಲ್ಲೆಯಲ್ಲಿ ಗಾಂಜಾಕ್ಕೆ ಕಡಿವಾಣ ಹಾಕುತ್ತೇವೆ ಎಂದರು.
ಇಲಾಖೆ ಅಧಿಕಾರಿಗಳಿಗೆ ಹೊಸ ರಿವಾಲ್ವಾರ್‌ಗಳನ್ನು ಒದಗಿಸುವ ಕುರಿತು ಇಲಾಖೆ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಹೇಳಿದರು.
ಇಲಾಖೆಯ ಚಿತ್ರದುರ್ಗ ಉಪ ಆಯಕ್ತ ಬಿ.ಮಾದೇಶ್, ಗದಗ ಉಪ ಆಯುಕ್ತ ಭರತೇಶ್, ಅಧಿಕಾರಿಗಳಾದ ವಿಶ್ವನಾಥ್, ಧರ್ಮಪ್ಪ, ಕುಮಾರ್, ರಾಜೇಂದ್ರ ಹೂಗಾರ್, ಸಿದ್ದೇಶ್ ನಾಯಕ್, ಸಾದತ್, ಪ್ರಮೀಳಾ, ಭಾರತಮ್ಮ, ನಗರಸಭೆ ಆರೋಗ್ಯ ನಿರೀಕ್ಷರಾದ ನಾಗರಾಜ್, ಬಸವರಾಜ್ ಇತರರು ಇದ್ದರು.