ನಿಸರ್ಗ ಮುನಿದರೆ ಮನುಕುಲದ ನಾಶ; ನ್ಯಾ.ವಿಶ್ವನಾಥ ಯಮಕನಮರಡಿ

JAL BIRADARI
ವಿಜಯಪುರದ ಮಹಾತ್ಮ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ‘ನೀರಿನ ಅಭಾವ ಮತ್ತು ಸದ್ಬಳಕೆ ಕುರಿತ ವಿಚಾರ ಸಂಕಿರಣ’ದ ಉದ್ಘಾಟನೆಯನ್ನು ಪ್ರಧಾನ ಸಿವಿಲ್ ನ್ಯಾಯಾಧೀಶ ವಿಶ್ವನಾಥ ಯಮಕನಮರಡಿ ನೆರವೇರಿಸಿದರು. ಪೀಟರ್ ಅಲೆಕ್ಸಾಂಡರ್, ಮಲ್ಲಿಕಾರ್ಜುನ ಭೃಂಗಿಮಠ, ಡಾ. ಚೇತನ ಮುರಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ನಿಸರ್ಗವೇ ದೇವರು. ಮನುಷ್ಯದ ಬದುಕು ನಿಸರ್ಗವೇ ನಿರ್ಧರಿಸುತ್ತದೆ. ನಿಸರ್ಗ ಮುನಿದರೆ ಮನುಕುಲವೇ ನಾಶಗೊಳ್ಳಲಿದೆ. ಹೀಗಾಗಿ ನಿಸರ್ಗದ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿಶ್ವನಾಥ ಯಮಕನಮರಡಿ ಹೇಳಿದರು.

ನಗರದ ಮಹಾತ್ಮ ಗಾಂಧಿ ಭವನದಲ್ಲಿ ಕರ್ನಾಟಕ ಜಲ ಬಿರಾದರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪರಸಕ್ಕಾಗಿ ನಾವು ಒಕ್ಕೂಟ, ರೋಟರಿ ಕ್ಲಬ್, ಮಾನುಮೆಂಟ್ ಹೆರಿಟೇಜ್ ಸಹಯೋದಲ್ಲಿ ವಿಶ್ವ ಜಲ ದಿನದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ‘ನೀರಿನ ಅಭಾವ ಮತ್ತು ಸದ್ಬಳಕೆ ಕುರಿತ ವಿಚಾರ ಸಂಕಿರಣ’ದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಪಂಚಮಹಾಭೂತಗಳಾದ ನೀರು, ಭೂಮಿ, ಆಕಾಶ, ಅಗ್ನಿ, ಗಾಳಿ ಇವುಗಳನ್ನು ಸಂರಕ್ಷಿಸಬೇಕು. ನೀರನ್ನು ಹಿತವಾಗಿ ಮಿತವಾಗಿ ಬಳಸಿ ಮುಂದಿನ ಜನಾಂಗಕ್ಕೂ ಉಳಿಸಬೇಕೆಂದರು.

ನೀರು ಭೂಮಿಯ ಮೇಲಿನ ಅಮೂಲ್ಯವಾದ ವಸ್ತು. ನೀರಿನ ಮಹತ್ವ ಗೊತ್ತಿದ್ದರೂ ಬಹುತೇಕರು ರಕ್ಷಣೆ ಮಾಡುವಲ್ಲಿ ಬೇಜವಾಬ್ದಾರಿ ತೋರುತ್ತಿದ್ದಾರೆ. ಪ್ರತಿಯೊಬ್ಬರೂ ಪರಿಸರ ಪೂರಕವಾಗಿ ಕಾರ್ಯಚಟುವಟಿಕೆಗಳು ಮಾಡಿದರೆ ಮಾತ್ರ ಭವಿಷ್ಯದಲ್ಲಿ ನೀರು ಸಿಗಲು ಸಾದ್ಯ. ಇಲ್ಲದೇ ಪರಿಸರ ವಿರುದ್ದ ನಡೆದುಕೊಂಡರೆ ನಿಸರ್ಗವೇ ಮುನಿಸಿಕೊಂಡು ಅತೀವೃಷ್ಠಿ ಅನಾವೃಷ್ಠಿಯಂತಹ ಅನಾಹುತಗಳು ಎದುರಿಸಬೇಕಾಗುತ್ತದೆ ಎಂದರು.

ನೀರಿಲ್ಲದೇ ಪ್ರತಿ ಜೀವರಾಶಿಗಳು ಬದುಕುಳಿಯಲು ಸಾಧ್ಯವಿಲ್ಲ, ನೀರು ಮಹತ್ವದ್ದಾಗಿದ್ದು ಇದರ ಸಂರಕ್ಷಣೆಗೆ ವಿಶ್ವದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಪ್ರತಿಜ್ಞೆ ಮಾಡಬೇಕು. ಜಲವನ್ನು ಮನಬಂದಂತೆ ಪೋಲು ಮಾಡಿ ಹಾಳು ಮಾಡಬಾರದು. ಮಾನವ ನಿರ್ಮಿತ ಯಾವುದೇ ಅಂಶ ಕೈಕೊಟ್ಟರೆ ರಿಪೇರಿ ಮಾಡಬಹುದು. ಆದರೆ ನಿಸರ್ಗವೇ ಹಾಳಾದರೆ ಸಕಲ ಜೀವಿಗಳ ನಾಶಕ್ಕೆ ದಾರಿಯಾಗುತ್ತದೆ ಎಂದರು.

ಜಲ ಬಿರಾದರಿ ಸಂಸ್ಥೆಯ ಜಿಲ್ಲಾಧ್ಯಕ್ಷ ಪೀಟರ್ ಅಲೆಕ್ಸಾಂಡರ್ ಮಾತನಾಡಿ, ಅಖಂಡ ವಿಜಯಪುರ ಜಿಲ್ಲೆಯನ್ನು ಪಂಚನದಿಗಳ ನಾಡು ಎಂದು ಕರೆಯಲಾಗುತ್ತದೆ. ಐದು ನದಿಗಳಿದ್ದರೂ ಅವಳಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನೀಗದಾಗಿದೆ. ಕಾರಣ ನಿಸರ್ಗದ ನಾಶ. ಹೀಗಾಗಿ ನಿಸರ್ಗದ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದರು.

ವಕೀಲ ಮಲ್ಲಿಕಾರ್ಜುನ ಭೃಂಗಿಮಠ, ಡಾ. ಚೇತನ ಮುರಾಳ, ಪ್ರೊ.ಸೈಫ್ ಅತ್ತಾರ ಮಾತನಾಡಿದರು. ಡಾ. ರಿಯಾಜ್ ಫಾರುಕಿ ಅಧ್ಯಕ್ಷತೆ ವಹಿಸಿದ್ದರು. ಮಹಾಂತೇಶ ಕೆರುಟಗಿ, ಪ್ರವೀಣಗೌಡ ಪಾಟೀಲ, ಸತೀಶ ಪಡಸಲಗಿ, ಯಲ್ಲಪ್ಪ ಇರಕಲ್ ಮತ್ತಿತರರಿದ್ದರು. ಬಾಳು ಜೇವೂರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net