

ಮೈಸೂರು: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರು ಒಂದು ಸಾವಿರ ಕೆರೆಗಳನ್ನು ನಿರ್ಮಾಣ ಮಾಡಿದರು. ಅಭಿವೃದ್ಧಿ ಹೆಸರಿನಲ್ಲಿ ಹಲವು ಕೆರೆಗಳು ಕಣ್ಮರೆಯಾಗಿವೆ. ಒಂದುವೇಳೆ ಆ ಕೆರೆಗಳನ್ನೆಲ್ಲ ಉಳಿಸಿಕೊಂಡಿದ್ದರೆ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮೇಕೆದಾಟು ಯೋಜನೆಯ ಅವಶ್ಯಕತೆ ಇರುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ವತಿಯಿಂದ ನಗರದ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ‘ನಾಡಪ್ರಭು ಕೆಂಪೇಗೌಡ ಮತ್ತು ಒಕ್ಕಲಿಗ ರಾಜಮನೆತನದ ಇತಿಹಾಸ’ ಕುರಿತು ಎರಡು ದಿನಗಳ ಕಾಲ ಹಮ್ಮಿಕೊಂಡ ವಿಚಾರ ಸಂಕಿರಣ ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಕೆಂಪೇಗೌಡರು ನಿರ್ಮಾಣ ಮಾಡಿದ ಕೆರೆಗಳನ್ನು ಉಳಿಸಿಕೊಂಡು ಬೆಂಗಳೂರಿನ ಅಭಿವೃದ್ಧಿಗೆ ಬೇರೆ ಜಾಗಗಳನ್ನು ಕಂಡುಕೊಳ್ಳಬಹು ತ್ತು. ಆದರೆ, ಹಲವಾರು ಕೆರೆಗಳು ಅಭಿವೃದ್ಧಿಗೋಸ್ಕರ ಮುಚ್ಚಿರುವುದು ಬೇಸರದ ಸಂಗತಿ. ರಾಜ್ಯದ ಅಭಿವೃದ್ಧಿಗೆ ಕೆಂಪೇಗೌಡ ಹಾಗೂ ಮೈಸೂರು ರಾಜಮನೆತನದ ಕೊಡುಗೆ ಅಪಾರವಾದದ್ದು. ಕೆಂಪೇಗೌಡ ವಂಶಸ್ಥರು ಬೆಂಗಳೂರು ನಗರವನ್ನು ಕಟ್ಟದೆ ಇದ್ದಿದ್ದರೆ ರಾಜ್ಯದ ಪರಿಸ್ಥಿತಿ ಹೇಗಿರುತಿತ್ತು ಗೊತ್ತಿಲ್ಲ. ಬೆಂಗಳೂರು ಇಂದು ದೊಡ್ಡ ನಗರವಾಗಿ ಬೆಳೆದು ನಿಂತಿದೆ. ಅದಕ್ಕೆ ಭದ್ರ ಬುನಾದಿ ಹಾಕಿದವರು ನಾಡಪ್ರಭು ಕೆಂಪೇಗೌಡರು ಎಂದು ಸ್ಮರಿಸಿದರು.
ಒಕ್ಕಲಿಗ ಸಮುದಾಯ ಸ್ವಾಭಿಮಾನದ ಸಮಾಜ. ಈ ಸಮುದಾಯಕ್ಕೆ ಕೊಟ್ಟು ಅಭ್ಯಾಸವಿದೆಯೇ ಹೊರತು ತೆಗೆದುಕೊಂಡು ಅಭ್ಯಾಸವಿಲ್ಲ. ಒಕ್ಕಲಿಗ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕುವೆಂಪು, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ರಾಜಕೀಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಮ್ಮ ಸಮುದಾಯದ ದಿಗ್ಗಜರು ಇದ್ದಂತೆ. ಹಲವು ಕ್ಷೇತ್ರಗಳಲ್ಲಿ ಕೊಡುಗೆ ನೀಡಿರುವ ಒಕ್ಕಲಿಗ ಸಮುದಾಯ ಉಳಿಯಬೇಕು. ಜತೆಗೆ ತುಳಿತಕ್ಕೆ ಒಳಗಾಗಿರುವ ಇತರೆ ಸಮಾಜಗಳು ಸಹ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಶಾಸಕ ಎಲ್. ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಕಾಂಗ್ರೆಸ್ ಮುಖಂಡ ಹರೀಶ್ ಗೌಡ, ಸಂಘದ ಅಧ್ಯಕ್ಷ ಬೆಟ್ಟೇಗೌಡ, ಗೌರವಾಧ್ಯಕ್ಷ ಸಿ.ಪಿ. ಕೃಷ್ಣಕುಮಾರ್, ಗೌರವ ಸಲಹೆಗಾರರಾದ ದೇವೇಗೌಡ, ಡಾ.ಬಿ.ಎನ್. ರವೀಶ್, ಜೆಡಿಎಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಹಾಗೂ ಇತರರು ಇದ್ದರು.