

ಮಂಗಳೂರು: ಸ್ಮಾರ್ಟ್‌ಸಿಟಿಯಿಂದ 8.50 ಕೋಟಿ ರೂಪಾಯಿ ವೆಚ್ಚದಲ್ಲಿ ಸುತ್ತಲೂ ಅಭಿವೃದ್ಧಿಗೊಂಡ ಕಾವೂರು ಕೆರೆ ಕಳೆದ ವರ್ಷದಂತೆ ಈ ಬಾರಿಯೂ ಬತ್ತಿ ಹೋಗಿದೆ. ಇದರಲ್ಲಿದ್ದ ಮೀನು, ಕಪ್ಪೆ, ಆಮೆ ಮೊದಲಾದ ಜಲಚರಗಳು ನಾಶವಾಗಿದೆ. ಕೆರೆಗೆ ತಂದು ಹಾಕಿದ ತ್ಯಾಜ್ಯ ನರಕ ದರ್ಶನವಾಗಿದೆ.
ಹಲವು ವರ್ಷಗಳ ಬಳಿಕ ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲಿ ಸಂಪೂರ್ಣ ಬತ್ತಿ ಹೋಗಿತ್ತು. ಈ ವರ್ಷ ಮೇ ತಿಂಗಳ ಮೊದಲ ವಾರದ ತನಕ ನೀರಿತ್ತು. ಸದ್ಯ ಮಧ್ಯ ಭಾಗದಲ್ಲಿ ಮಾತ್ರ ನೀರಿದ್ದು, ಮಳೆ ಬಾರದಿದ್ದರೆ ಎರಡು ಮೂರು ದಿನಗಳಲ್ಲಿ ಸಂಪೂರ್ಣ ಬತ್ತಿ ಹೋಗುವ ಸಾಧ್ಯತೆ ಇದೆ.
ಕೆರೆಯ ಸುತ್ತಲೂ ವಾಕಿಂಗ್‌ಗೆ ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸಲಾಗಿದೆ. ಕುಳಿತುಕೊಂಡು ವಿಶ್ರಾಂತಿ ಪಡೆಯಲು ಕಲ್ಲು ಬೆಂಚುಗಳನ್ನು ಅಳವಡಿಸಲಾಗಿದೆ. ರಾತ್ರಿಯಲ್ಲೂ ವಾಕಿಂಗ್ ಮಾಡಲು ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಆದರೆ ನಡುವಿನ ಕೆರೆಯನ್ನು ಮಾತ್ರ ಅಲ್ಲಿಂದಲ್ಲಿಗೆ ಸರಿಪಡಿಸಿದ ಕಾರಣ ನೀರು ಪ್ರತೀ ವರ್ಷ ಸಂಪೂರ್ಣ ಬತ್ತಿ ಹೋಗುತ್ತಿದೆ. ಕೆರೆಯಲ್ಲಿ ನೀರು ತುಂಬಿದ್ದರೆ ಮಾತ್ರ ಪರಿಸರ ಸುಂದರವಾಗಿ ಗೋಚರಿಸುತ್ತದೆ.
ಪ್ಲಾಸ್ಟಿಕ್ ರಾಶಿ ದರ್ಶನ: ನೀರು ಇರುವಾಗ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ಲಾಸ್ಟಿಕ್‌ನಲ್ಲಿ ತುಂಬಿಸಿ ಯಾರಿಗೂ ಗೊತ್ತಾಗದಿರಲಿ ಎಂದು ಕೆರೆಗೆ ತಂದು ಹಾಕುತ್ತಿದ್ದು, ಈಗ ಕೆರೆಯ ನೀರು ಸಂಪೂರ್ಣ ಬತ್ತಿ ಹೋಗುವಾಗ ರಾಶಿ ರಾಶಿ ಪ್ಲಾಸ್ಟಿಕ್‌ಗಳ ನರಕ ದರ್ಶನವಾಗಿದೆ. ಜತೆಗೆ ಪ್ಲಾಸ್ಟಿಕ್ ಬಾಟಲಿಗಳು, ಸಿಯಾಳ ಸಿಪ್ಪೆ ಮೊದಲಾದುವುದು ಕೆರೆಯಲ್ಲಿ ಕಾಣಿಸುತ್ತಿದೆ. ಕೆರೆಯ ಸುತ್ತಲೂ ಕಬ್ಬಿಣದ ಬೇಲಿ ಹಾಕಿದ್ದರೂ, ಅದರ ಮೇಲ್ಗಡೆಯಿಂದ ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಚೀಲಗಳನ್ನು ಬಿಸಾಡುತ್ತಿದ್ದಾರೆ. ಇಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ನಿಗಾ ಇಟ್ಟು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪಾಲಿಕೆಗೆ ಅವಕಾಶವಿದೆ.
ಸ್ಥಳೀಯರ ಅಸಮಾಧಾನ
ಸ್ಮಾರ್ಟ್‌ಸಿಟಿಯಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೆರೆ ಸುತ್ತ ಅಭಿವೃದ್ಧಿಪಡಿಸುವಾಗ ಕೆರೆಯ ಒಳಗಡೆ ಅಭಿವೃದ್ಧಿ ಪಡಿಸದೆ ಇರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. 5 ಅಡಿ ಆದರೂ ಕೆರೆಯಲ್ಲಿ ತುಂಬಿದ್ದ ಹೂಳು ತೆಗೆಯುತ್ತಿದ್ದರೆ ಕಾವೂರು ಗ್ರಾಮಕ್ಕೆ ಬೇಕಾದಷ್ಟು ನೀರು ಲಭ್ಯವಾಗುತ್ತಿತ್ತು ಎಂದು ಸ್ಥಳೀಯ ನಿವಾಸಿ ಕಿಶೋರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಹಂದಿ ತ್ಯಾಜ್ಯ ಕೆರೆಗೆ ಸೇರ್ಪಡೆ
ವಿಶಾಲವಾಗಿದ್ದ ಕಾವೂರು ಕೆರೆ ಬಹಳಷ್ಟು ಒತ್ತುವರಿಯಾಗಿದೆ. ಈ ಪರಿಸರದಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿದ್ದು, ಇದರ ತ್ಯಾಜ್ಯವನ್ನು ಕೆರೆಗೆ ಬಿಡಲಾಗುತ್ತಿದೆ. ಜತೆಗೆ ಒಳಚರಂಡಿಯ ನೀರು ಕೂಡ ಕೆರೆ ನೀರಿಗೆ ಬಂದು ಸೇರುತ್ತದೆ. ಪರಿಣಾಮ ಕೆರೆಯ ನೀರು ಸಂಪೂರ್ಣ ಕಲ್ಮಶವಾಗಿದೆ. ಭಾರಿ ಪ್ರಮಾಣದಲ್ಲಿ ಹೂಳು ಕೂಡ ಸಂಗ್ರಹವಾಗಿದೆ. ನೀರು ಬತ್ತಿ ಹೋಗುತ್ತಿದ್ದಂತೆ ಕೆರೆಯ ಪರಿಸರದಲ್ಲಿ ಕೆಸರು ವಾಸನೆ ಬರತೊಡಗಿದೆ.
ಕಾವೂರು ಕೆರೆ ಕಳೆದ ವರ್ಷದಂತೆ ಈ ವರ್ಷವೂ ಬತ್ತಿ ಹೋಗಿದೆ. ಕೆರೆಯ ಹೂಳೆತ್ತಿ ಒಂದಷ್ಟು ಆಳ ಮಾಡುತ್ತಿದ್ದರೆ ಬೇಕಾದಷ್ಟು ನೀರು ಲಭ್ಯವಿತ್ತು. ಸ್ಮಾರ್ಟ್‌ಸಿಟಿಯಿಂದ ಕೇವಲ ಕೆರೆಯ ಆವರಣವನ್ನಷ್ಟೇ ಸುಂದರ ಮಾಡಿದ್ದಾರೆ. ಒಟ್ಟಿಗೆ ಕೆರೆಯ ಒಳಗಡೆ ಕೂಡ ಕೆಲಸ ಮಾಡಬೇಕಿತ್ತು. ಹೊರಗಿನಿಂದ ಕೊಳಚೆ ನೀರು ಕೆರೆಗೆ ಸೇರದಂತೆ ತಡೆಗಟ್ಟುವುದು ಅವಶ್ಯವಾಗಿದೆ.
ರಾಧಾಕೃಷ್ಣ ಕಾವೂರು
ಖಾಸಗಿ ಉದ್ಯೋಗಿ