ಹಿಂದೂ ಸಂಸ್ಕೃತಿಯ ವಿನಾಶ ಅಸಾಧ್ಯ: ರಾಧಾಕೃಷ್ಣ ಅಡ್ಯಂತಾಯ

MDK02
Published on

ಮಡಿಕೇರಿ: ಸನಾತನ ಹಿಂದೂ ಧರ್ಮವನ್ನು ವಿನಾಶ ಮಾಡಲೆಂದು ಕೆಲವೊಂದು ಸಂಚು ನಡೆಯುತ್ತಿದೆ. ಇದರಿಂದ ಸಂಸ್ಕೃತಿಯ ಅಳಿವು ಸಾಧ್ಯ ಎಂಬ ಕನಸನ್ನು ಕೆಲವರು ಕಾಣುತ್ತಿದ್ದು, ಇದು ಅಸಾಧ್ಯ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಮಿತಿ ಪ್ರಮುಖ ರಾಧಾಕೃಷ್ಣ ಅಡ್ಯಂತಾಯ ಕಲ್ಲಡ್ಕ ಹೇಳಿದರು.


ಮೇಕೇರಿಯ ಗೌರಿಶಂಕರ ದೇವಾಲಯದಲ್ಲಿ ಭಾನುವಾರ ನಡೆದ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲೋಶೋತ್ಸವದ ಸಮಾರೋಪದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶಾಲ ಹಿಂದೂ ಸಮಾಜ ಇಡೀ ಜಗತ್ತಿಗೆ ಮಾದರಿಯಾಗಿದೆ.

ದೇವರ ಮೇಲೆ ನಂಬಿಕೆ ಹೊಂದಿರುವ ನಾವು ಹಿಂದೂ ಪರಂಪರೆಯನ್ನು ಉಳಿಸಬೇಕು. ಮಗುವಿನ ನಗುವಿನಲ್ಲಿ, ನಿರ್ಗತಿಕರ ಬವಣೆ ತೀರಿಸುವ ಪ್ರಯತ್ನ ಮಾಡಿದರೆ, ಭಜನೆ ಹಾಗೂ ಶರಣಾಗತ ಭಾವ ಭಕ್ತಿಯಿಂದ ದೇವರನ್ನು ಕಾಣಬಹುದಾಗಿದೆ. ವಿಜ್ಞಾನಿಗಳು ಹೇಳುವುದನ್ನು ನಂಬುವ ನಾವು ವಿಶೇಷ ಜ್ಞಾನಿಗಳ ಮಾತನ್ನು ಮರೆಯುತ್ತಿದ್ದೇವೆ. ಇದರಿಂದ ನಮ್ಮ ಸಂಸ್ಕೃತಿ, ಪರಂಪರೆಗೆ ಧಕ್ಕೆ ಬರುತ್ತಿದೆ. ಪಾಶ್ಚತ್ಯ ಸಂಸ್ಕೃತಿಯನ್ನು ನಮ್ಮ ಆಚರಣೆಯಲ್ಲಿ ಅಳವಡಿಸಿಕೊಂಡು ಮೂಲವನ್ನು ಕಡೆಗಣಿಸುತ್ತಿರುವುದು ವಿಪರ್ಯಾಸ ಎಂದು ವಿಷಾದಿಸಿದರು.


ಹಿಂದೂಗಳ ನಂಬಿಕೆ ಮೌಢ್ಯ, ಅನಾಗರಿಕತೆಯಲ್ಲ. ಅದರ ಹಿಂದೆ ಸತ್ವಪೂರ್ಣ ಹಾಗೂ ವೈಜ್ಞಾನಿಕತೆ ಅಡಗಿದೆ. ಪ್ರಕೃತಿ ಆರಾಧಾನೆಯ ಮೂಲಕ ಸೃಷ್ಟಿಯಲ್ಲಿ ದೇವರನ್ನು ಕಾಣುತ್ತಿದ್ದೇವೆ. ನೂರಾರೂ ಜಾತಿ, ಭಾಷೆ ಈ ದೇಶದ ವೈಶಿಷ್ಟ್ಯವಾಗಿದೆ. ನಮಗೆ ಜಾತಿ ಬೇಕು ಆದರೆ, ಬೇಧ ಬೇಡ, ಭಾಷೆಯೂ ಬೇಕು ಆದರೆ ದ್ವೇಷ ಬೇಡ ಎಂದು ಪ್ರತಿಪಾದಿಸಿದ ರಾಧಾಕೃಷ್ಣ ಅವರು, ಹಿಂದೂ ಸಮಾಜವನ್ನು ಒಡೆಯುವ ಸಂಚಿನ ವಿರುದ್ಧ ನಾವು ಜಾಗೃತಗೊಳ್ಳಬೇಕು. ಪೋಷಕರು ಧರ್ಮದ ಅರ್ಥವನ್ನು ಮಕ್ಕಳಿಗೆ ಕಲಿಸಬೇಕು. ಧರ್ಮದ ಪುನರ್‌ಪ್ರತಿಷ್ಠಾಪನೆಗೆ ಕಟಿಬದ್ಧರಾಗಿರಬೇಕು. ಪ್ರಪಂಚದಲ್ಲಿ ೪೬ ಸಂಸ್ಕೃತಿಗಳು ವಿನಾಶವಾಗಿದೆ. ಆದರೆ, ಹಿಂದೂ ಸಂಸ್ಕೃತಿಯನ್ನು ನಾಶ ಮಾಡುವ ಪ್ರಯತ್ನ ಮಾತ್ರ ವಿಫಲವಾಗಿದೆ. ಇದು ಹಿಂದೂ ಪರಂಪರೆಯ ಶಕ್ತಿಯನ್ನು ಸಾಬೀತುಪಡಿಸಿದೆ. ಹಿಂದೂಗಳು ನೀರು ಕೇಳಿದರೆ, ಹಾಲು ಕೊಡುವ ಮನಸ್ಥಿತಿ ಉಳ್ಳವರು. ಆದರೆ, ಹಾಲು ಕೊಟ್ಟವರಿಗೆ ವಿಷ ಉಣಿಸುವ ಕೆಲಸ ನಡೆಯುತ್ತಿದೆ. ಮತಾಂತರದ ಜಾಲಕ್ಕೆ ನಾವು ಸಿಲುಕಿಕೊಳ್ಳುತ್ತಿದ್ದೇವೆ. ಆಚಾರ-ವಿಚಾರ, ಸಂಸ್ಕೃತಿಯಿಂದ ದೂರವಾಗಿರುವುದರ ಪರಿಣಾಮ ಯುವಜನಾಂಗ ಪ್ರಜ್ಞಾವಂತಿಕೆ ಕಳೆದುಕೊಂಡು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ ಎಂದು ಪ್ರತಿಪಾದಿಸಿದರು.


ಸಭೆಯಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಕೆ.ಪೂರ್ಣಯ್ಯ, ಉಪಾಧ್ಯಕ್ಷ ಕೆ.ಆರ್.ಬೆಳ್ಯಪ್ಪ, ಸದಸ್ಯರುಗಳಾದ ರತ್ನಾಕರ, ವಸಂತ್ ಕುಮಾರ್ ಹಾಜರಿದ್ದರು. ಧಾರ್ಮಿಕ ಪ್ರವಚನಕ್ಕೂ ಮುನ್ನ ಗೌರಿಶಂಕರ ದೇವರಿಗೆ ಬ್ರಹ್ಮಕಲಶಾಭಿಷೇಕ, ಗಣಪತಿ, ಸುಬ್ರಹ್ಮಣ್ಯ ದೇವರಿಗೆ ಕಲಶ ಅಭಿಷೇಕ, ಮಹಾಪೂಜೆ, ಮಂಗಳ ಮಂತ್ರಾಕ್ಷತೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನೆರವೇರಿತು. ನೂರಾರು ಭಕ್ತಾದಿಗಳು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net