ಬಹುರಾಷ್ಟ್ರೀಯ ಕಂಪನಿಗಳಿಂದ ಸಂಸ್ಕೃತಿ ನಾಶ, ಸಮ್ಮೇಳನಾಧ್ಯಕ್ಷ ಕೃಷ್ಣಪ್ಪ ಕಳವಳ ದೇವನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮ

Dhl Sammelana News ph 1e
Published on

ದೇವನಹಳ್ಳಿ: ಕನ್ನಡ ಭಾಷೆ ಪ್ರಬುದ್ಧವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಜಾಗತೀಕರಣ ಮತ್ತು ಉದಾರೀಕರಣದ ಪರಿಣಾಮ ಬಹುರಾಷ್ಟ್ರೀಯ ಕಂಪನಿಗಳು ರಾಜ್ಯಕ್ಕೆ ಲಗ್ಗೆ ಇಡುತ್ತಿವೆ. ಇವು ಕನ್ನಡ ಸಂಸ್ಕೃತಿ ಬೆಳವಣಿಗೆಗೆ ಮಾರಕವಾಗಿವೆ ಎಂದು ದೇವನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಗುರುವಾರ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು.

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ಸಿಗುವಂತಾಗಬೇಕು. ಬ್ಯಾಂಕಿಂಗ್ ವಲಯದಲ್ಲೂ ಕನ್ನಡಿಗರಿಗೆ ಅವಕಾಶ ಲಭಿಸುವಂತಾಗಬೇಕು ಎಂದು ಆಗ್ರಹಿಸಿದರು.

ಇತ್ತೀಚೆಗೆ ಭಾಷಾ ವಿವಾದಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಇಂಥ ಚರ್ಚೆಗಳು ಸಕಾರಾತ್ಮಕವಾಗಿ ತೀರ್ಮಾನವಾಗಬೇಕು. ತನ್ಮೂಲಕ ವಿವಾದಗಳಿಗೆ ತೆರೆ ಎಳೆಯಬೇಕು. ಇಂಥ ಸಮ್ಮೇಳನಗಳು ಅದಕ್ಕೆ ಪೂರಕವಾಗಿ ನಡೆಯಬೇಕು ಎಂದು ಹೇಳಿದರು.

ಅಧ್ಯಕ್ಷರ ಒತ್ತಾಯಗಳು: ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷಾ ಶಿಕ್ಷಣ ಕಡ್ಡಾಯಗೊಳಿಸಬೇಕು. ಸಾರ್ವಜನಿಕ ಕ್ಷೇತ್ರಗಳ ಎಲ್ಲ ವ್ಯವಹಾರಗಳು ಕನ್ನಡದಲ್ಲಿರಬೇಕು. ಸರ್ಕಾರದ ಎಲ್ಲ ಸಭೆ ಸಮಾರಂಭ, ಕಲಾಪಗಳು ಕನ್ನಡದಲ್ಲಿಯೇ ಆಗಬೇಕು. ಶಾಸ್ತ್ರೀಯ ಭಾಷೆಯ ಸ್ಥಾನ ಹೊಂದಿರುವ ಕನ್ನಡದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು. ಸ್ಥಳೀಯ ಯುವಕ ಯುವತಿಯರಿಗೆ ತಾಲೂಕಿನ ಉದ್ದಿಮೆಗಳಲ್ಲಿ ಉದ್ಯೋಗ ಕಲ್ಪಿಸಬೇಕು. ಗ್ರಾಮಾಂತರ ಜಿಲ್ಲೆ ಎಂಬುದನ್ನು ಬದಲಿಸಿ ದೇವನಹಳ್ಳಿ ಜಿಲ್ಲೆ ಎಂದು ಘೋಷಿಸಬೇಕು.

ವಿಜಯಪುರವನ್ನು ತಾಲೂಕು ಎಂದು ಘೋಷಿಸಬೇಕು. ಜನಪ್ರತಿನಿಧಿಗಳು ಧರ್ಮದರ್ಶಿಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಬೇಕು. ದೇವನಹಳ್ಳಿ ಮಾರ್ಗ ವಿಜಯಪುರ ಪಟ್ಟಣದವರೆಗೂ ಕಾವೇರಿ ನೀರು ಒದಗಿಸಬೇಕು. ನಮ್ಮ ಭಾಗದ ರೈತರಿಗೆ ಉತ್ತೇಜನ, ಮಾರ್ಗದರ್ಶನದ ಜತೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ತಾಲೂಕಿನ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು. ನಮ್ಮ ತಾಲೂಕಿಗೆ ಬಂದಿರುವ ವಲಸಿಗ ಕಾರ್ಮಿಕರಿಗೆ ಕನ್ನಡ ಕಲಿಸಬೇಕು ಎಂದು ಸಮ್ಮೇಳನಾಧ್ಯಕ್ಷರು ಒತ್ತಾಯಿಸಿದರು.

ಅನುಷ್ಠಾನ ಕಾರ್ಯಕ್ರಮಗಳು ಜಾರಿಯಾಗಲಿ: ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಸರ್ಕಾರ ಕನ್ನಡ ಕಾಯಕವರ್ಷ ಎಂದು ಘೊಷಿಸಿದರೆ ಸಾಲದು. ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಅನುಷ್ಠಾನ ಕಾರ್ಯಕ್ರಮ ಜಾರಿಗೆ ತರಬೇಕು ಎಂದು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಹೇಳಿದರು.

ಗಡಿನಾಡಿನ ಜಿಲ್ಲೆಗಳಲ್ಲಿ ನೆಲ, ಜಲ, ಭಾಷೆ ಸಂಸ್ಕೃತಿಗೆ ತೊಂದರೆ ಆಗುವಂಥ ಘಟನೆಗಳು ನಡೆಯುತ್ತಿವೆ. ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಸರ್ವಪಕ್ಷಗಳ ಸಹಕಾರದೊಂದಿಗೆ ಕಾನೂನಾತ್ಮಕ ಸುಧಾರಣಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಾಧು-ಸಂತರ ಪುಣ್ಯ ಭೂಮಿ: ನಮ್ಮ ಹೆಮ್ಮೆಯ ಕನ್ನಡ ನಾಡು ಮತ್ತು ಭಾಷೆಗೆ ಯುಗಯುಗಗಳ ಇತಿಹಾಸವಿದೆ. ರಾಮಭಂಟ ಹನುಮ, ಕಾಯಕವೇ ಕೈಲಾಸ ಎಂದ ಬಸವಣ್ಣ, ದಾಸಶ್ರೇಷ್ಠ ಕನಕದಾಸರಾದಿಯಾಗಿ ಕುವೆಂಪು, ಬೇಂದ್ರೆ, ಡಿವಿಜಿ ಅವರಂಥ ವರಕವಿಗಳು, ಸಾಧು ಸಂತರು ಜನಿಸಿದ ಈ ಪುಣ್ಯಭೂಮಿಯಲ್ಲಿ ಕನ್ನಡ ನುಡಿತೇರನ್ನು ಎಲ್ಲೆಡೆ ಎಳೆದು, ನಾಡಿನ ಕಲೆ ಸಾಹಿತ್ಯ ಉಳಿಸುವ ಕೆಲಸವಾಗಬೇಕು ಎಂದು ಮಹರ್ಷಿ ಆನಂದ ಗುರೂಜಿ ಹೇಳಿದರು.

ಮೊದಲು ಮಾತೃಭಾಷೆಯನ್ನು ಗೌರವಿಸಬೇಕು. ಹಾಗೆಂದು ಅನ್ಯ ಭಾಷೆಗಳನ್ನು ದ್ವೇಷಿಸಬಾರದು. ವ್ಯವಹಾರಕ್ಕೆ ಮತ್ತು ಅಂತಾರಾಷ್ಟ್ರೀಯ ಸಂಪರ್ಕಕ್ಕೆ ಆಂಗ್ಲ ಭಾಷೆ ಬೇಕು. ಆದರೆ, ಎಲ್ಲವೂ ಅದೇ ಆಗಬಾರದು ಎಂದು ಹೇಳಿದರು.

ಗಣ್ಯರಿಂದ ದ್ವಜಾರೋಹಣ: ದೇವನಹಳ್ಳಿ ತಾಲೂಕು 26ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಗುರುವಾರ ಬೆಳಗ್ಗೆ ಚಾಲನೆ ನೀಡಿದರು. ಶಾಸಕರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರೆ, ಪುರಸಭೆ ಅಧ್ಯಕ್ಷೆ ರೇಖಾ ವೇಣುಗೋಪಾಲ್ ನಾಡಧ್ವಜಾರೋಹಣ ಮಾಡಿದರು. ತಾಲೂಕು ಕಸಾಪ ಅಧ್ಯಕ್ಷ ಆರ್.ಕೆ. ನಂಜೇಗೌಡ ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆ, ನಾಡಗೀತೆ ಸಮೂಹ ಗಾಯನದ ಮೂಲಕ ನುಡಿ ಜಾತ್ರೆಗೆ ಮುನ್ನುಡಿ ಬರೆಯಲಾಯಿತು.

ನಾನು ಕನ್ನಡಾಭಿಮಾನಿ. ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿದ್ದೇನೆ. ನಾಡು-ನುಡಿ, ನೆಲ-ಜಲದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿ ಬಲಿಷ್ಠ ನಾಡು ಕಟ್ಟಲು ಮುಂದಾಗೋಣ. ನಮ್ಮ ಸಾಹಿತ್ಯ ಸಂಸ್ಕೃತಿ, ಕಲೆ ಉಳಿಸಿ ಬೆಳೆಸೋಣ, ಕನ್ನಡ ಸಾಹಿತ್ಯ ಜಾತ್ರೆ ಮತ್ತಷ್ಟು ವ್ಯವಸ್ಥಿತವಾಗಿ ನಡೆಸಿ ದೇವನಹಳ್ಳಿ ತಾಲೂಕಿನ ಹೆಸರಿಗೆ ಮೆರುಗು ತರೋಣ. ನಿಸರ್ಗ ನಾರಾಯಣಸ್ವಾಮಿ, ಶಾಸಕ

ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ: ಸಮ್ಮೇಳನಾಧ್ಯಕ್ಷ ಬಿ.ಎನ್. ಕೃಷ್ಣಪ್ಪ ಅವರು ಪಟ್ಟಣದ ಪ್ರಧಾನ ದೈವ ಶ್ರೀ ವೇಣುಗೋಪಾಲಸ್ವಾಮಿಗೆ ಪೂಜೆ ಸಲ್ಲಿಸಿದರು. ಬಳಿಕ ಅವರನ್ನು ಸುವರ್ಣ ರಥದಲ್ಲಿ ಮೆರವಣಿಗೆ ಕರೆದೊಯ್ಯಲಾಯಿತು. ಮಹಿಳೆಯರು ಪೂರ್ಣಕುಂಭದೊಂದಿಗೆ ಸಾಗಿದರು. ಮಂಗಳ ವಾದ್ಯ, ವೀರಗಾಸೆ, ಕೀಲುಕುದುರೆ, ಡೊಳ್ಳುಕುಣಿತ, ಪೂಜಾಕುಣಿದ ಸೇರಿ ಅನೇಕ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನದೊಂದಿಗೆ ದೇವಾಲಯದಿಂದ ಹೊರಟು ಗಾಂಧಿ ಚೌಕದ ಮೂಲಕ ಬಜಾರ್ ರಸ್ತೆ, ತಾಲೂಕು ಕಚೇರಿ ರಸ್ತೆಯ ಮೂಲಕ ಸಮ್ಮೇಳನಾಧ್ಯಕ್ಷರನ್ನು ಡಾ.ಬಿ.ಆರ್. ಅಂಬೇಡ್ಕರ್ ಭವನದ ಪೈಲ್ವಾನ್ ಸುಬ್ಬಣ್ಣ ವೇದಿಕೆಗೆ ಕರೆತರಲಾಯಿತು.

ಉಪಸ್ಥಿತರಿದ್ದ ಪ್ರಮುಖರು: ಜಿಲ್ಲಾ ಕಸಾಪ ಅಧ್ಯಕ್ಷ ಚಿಮಾ ಸುಧಾಕರ್, ತಾಲೂಕು ಕಸಾಪ ಅಧ್ಯಕ್ಷ ಆರ್.ಕೆ.ನಂಜೇಗೌಡ, ಹೊಸಕೋಟೆ ತಾಲೂಕು ಅಧ್ಯಕ್ಷ ಟಿಡಿಎನ್ ಮೂರ್ತಿ, ಜಿಪಂ ಸದಸ್ಯೆ ಅನಂತಕುಮಾರಿ, ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ, ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀನಾರಾಯಣ, ತಾಲೂಕು ಸೊಸೈಟಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ತಾಲೂಕು ಕಸಾಪ ಸಂಚಾಲಕ ಬಿ.ಕೆ. ಶಿವಪ್ಪ, ಕರವೇ ಗೌರವಾಧ್ಯಕ್ಷ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಮುನಿರಾಜು ಅಪ್ಪಯ್ಯ,ಕಾರ್ಯಾಧ್ಯಕ್ಷ ವಿನೋದ್ ಕುಮಾರ್‌ಗೌಡ, ಸಮರಸೇನೆ ಅಧ್ಯಕ್ಷ ಗೋಕರೆಗೇಟ್ ಮಂಜುನಾಥ್, ತಾಲೂಕು ಅಧ್ಯಕ್ಷ ವೆಂಕಟರಾಜು, ತಾಲೂಕು ಕಸಾಪ ಮಹಿಳಾ ಅಧ್ಯಕ್ಷೆ ಪುನಿತಾ ನಟರಾಜ್, ಮಾನವಹಕ್ಕುಗಳ ಜಾಗೃತಿ ಸಮಿತಿ ತಾಲೂಕು ಅಧ್ಯಕ್ಷ ಎ.ಎಂ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಪರಮೇಶ್ವರಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net