

ಗಜೇಂದ್ರಗಡ: ಪಟ್ಟಣದ ರೋಣ ರಸ್ತೆಯಲ್ಲಿನ ಸಿಬಿಎಸ್‌ಸಿ ಶಾಲೆ ಪಕ್ಕದ 2.11 ಎಕರೆ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿದ್ದ ಅಲಸಂದಿ ಹಾಗೂ ಪುರ್ತಗೇರಿ ಗ್ರಾಮದ ಹತ್ತಿರ 2.12 ಎಕರೆ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಟ್ರ್ಯಾಕ್ಟರ್ ಮೂಲಕ ಹರಗಿ ನಾಶ ಮಾಡಿದ್ದಾರೆ.
ಪುರ್ತಗೇರಿ ಗ್ರಾಮದ ಮಲ್ಲಪ್ಪ ಕಳಕಪ್ಪ ಮುಶೀಗೇರಿ ಕುಟುಂಬದವರು 2.11 ಎಕರೆ ಜಮೀನಿನಲ್ಲಿ ಅಲಸಂದಿ ಹಾಗೂ 2.12 ಎಕರೆ ಜಮೀನಿನಲ್ಲಿ ಬಿಜೋತ್ಪಾದನೆಗಾಗಿ ಹತ್ತಿ ಬೆಳೆ ಬೆಳದಿದ್ದರು.
ಈ ಕುರಿತು ಅಳಲು ತೋಡಿಕೊಂಡ ರೈತರು, 25 ರಿಂದ 30 ಸಾವಿರ ರೂ. ಖರ್ಚು ಮಾಡಿ ಅಲಸಂದಿ ಹಾಗೂ 70 ರಿಂದ 80 ಸಾವಿರ ರೂ. ಖರ್ಚು ಮಾಡಿ ಹತ್ತಿ ಬೆಳೆಯಲಾಗಿತ್ತು. ಹೀಗಾಗಿ ಎರಡ್ಮೂರು ಸಲ ಪಿಳಗುಂಟಿ ಹೊಡೆಸಿದ್ದೆ, ಕಸ ತೆಗೆಸಿ ಗೊಬ್ಬರ ಹಾಕಿ ಬೆಳೆ ಬೆಳಿದ್ದರಿಂದ ಬೆಳೆಯೂ ಸಮೃದ್ಧವಾಗಿ ಬಂದಿತ್ತು. ಈ ಬಾರಿ 5 ರಿಂದ 6 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇತ್ತು. ಆದರೆ, ಯಾರೋ ದುಷ್ಟರು ಫಸಲನ್ನು ನಾಶ ಮಾಡಿದ್ದಾರೆ.
ಪೊಲೀಸರು ತಪ್ಪಿತ್ತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಹಾನಿಯಾದ ಬೆಳೆಯ ನಷ್ಟವನ್ನು ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ. ಘಟನೆ ಕುರಿತು ಶನಿವಾರ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.