

ಆಲ್ದೂರು: ಮಲೆನಾಡಿನ ಕಾಫಿ ತೋಟಗಳಲ್ಲಿ ಮತ್ತೆ ಕಾಡಾನೆಗಳ ಗುಂಪು ಪ್ರತ್ಯಕ್ಷವಾಗಿದ್ದು, ಕಾಡಾನೆಗಳ ಹಾವಳಿಗೆ ಕಾಫಿ ಬೆಳೆಗಾರರು ಹೈರಾಣಾಗಿದ್ದಾರೆ. ದಿನದಿಂದ ದಿನಕ್ಕೆ ಆನೆಗಳ ಉಪಟಳ ಹೆಚ್ಚಾಗುತ್ತಿದ್ದು, ಬೆಳೆಗಾರರಿಗೆ ಬೆಳೆಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ.
ವರ್ಷದಿಂದ ವರ್ಷಕ್ಕೆ ಆಲ್ದೂರು ಭಾಗದ ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಕಾಫಿ ತೋಟಗಳಲ್ಲಿ ವರ್ಷಕ್ಕೊಮ್ಮೆ ಅಪರೂಪಕ್ಕೆ ಅಲ್ಲಲ್ಲಿ ಬಂದು ಹೋಗುತ್ತಿದ್ದ ಆನೆಗಳು ಇಂದು ಜಾನುವಾರುಗಳಂತೆ ಮನೆ ಹಿಂದೆ ಮುಂದೆಯೇ ಓಡಾಡುತ್ತಿರುವುದರಿಂದ ಸಾರ್ವಜನಿಕರು ಭಯಗೊಂಡಿದ್ದಾರೆ. ಗ್ರಾಮೀಣ ಭಾಗದ ರಸ್ತೆಗಳಲ್ಲಿ ವಾಹನಗಳಿಗೆ, ಬೈಕ್ ಸವಾರರಿಗೆ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಕೂದಲೆಳೆ ಅಂತರದಲ್ಲಿ ಸಾವರರು ಆನೆಗಳ ದಾಳಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಭಾಗದ ಕಾಫಿ ತೋಟದಲ್ಲಿ ಕಾಫಿ ಗಿಡಗಳ ಮಧ್ಯ ಏಕಾಏಕಿ ಆನೆಗಳು ಪ್ರತ್ಯಕ್ಷವಾಗುತ್ತಿರುವುದು ಕಾರ್ಮಿಕರು, ತೋಟದ ಮಾಲೀಕರ ನಿದ್ದೆಗೆಡಿಸಿದೆ.
ಮಲೆನಾಡಿನ ಕಾಫಿ ತೋಟದ ನಡುವೆ ಅಂತರ ಬೆಳೆಯಾಗಿ ಬಾಳೆ ಗುರುತಿಸಿಕೊಂಡಿದೆ. ಇದು ಕಾಫಿ ಬೆಳೆಗಾರರಿಗೆ ಉಪ ಆದಾಯದ ಮೂಲವಾಗಿತ್ತು. ಮನೆಯ ಸಣ್ಣ ಪುಟ್ಟ ಖರ್ಚುಗಳಿಗೆ ಕಾಫಿ ತೋಟದಲ್ಲಿ ಬಾಳೆ ಬೆಳೆದು ಗೊನೆಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದರು. ಇನ್ನೂ ಕೆಲವು ಕುಟುಂಬಗಳು ಇದನ್ನೇ ಆದಾಯ ಮೂಲವಾಗಿಸಿಕೊಂಡು ಜೀವನ ನಡೆಸುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ತೋಟಗಳಿಗೆ ಲಗ್ಗೆ ಇಟ್ಟು ಬಾಳೆಗಿಡಗಳನ್ನು ಸಂಪೂರ್ಣ ನಾಶ ಮಾಡುತ್ತಿರುವುದರಿಂದ ಬೇಸತ್ತ ಬೆಳೆಗಾರರು ಬಾಳೆ ಬೆಳೆಯುವುದನ್ನು ಬಿಟ್ಟಿದ್ದಾರೆ. ಇನ್ನೂ ಹಲಸಿನ ಕಾಯಿಗೂ ಆನೆಗಳು ದಾಳಿ ಮಾಡುತ್ತಿರುವುದರಿಂದ ಹಲಸಿನ ಕಾಯಿಗಳನ್ನು ಕಿತ್ತು ಹಾಕುತ್ತಿದ್ದಾರೆ.