

ಹೊನ್ನಾವರ: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿ ಪ್ಲೈ ಓವರ್ (ಮೇಲ್ಸೇತುವೆ) ನಿರ್ವಣ, ಅಂಡರ್ಪಾಸ್ ರಸ್ತೆ ಮತ್ತು ಸರ್ವೀಸ್ ರಸ್ತೆಗಳನ್ನು ನಿರ್ವಿುಸಬೇಕು ಎಂದು ಆಗ್ರಹಿಸಿ ಹೊನ್ನಾವರ ಉಳಿಸಿ ಬೆಳೆಸಿ ಸಂಘಟನೆಯ ಪ್ರಮುಖ ಜಿ.ಎನ್. ಗೌಡ ನೇತೃತ್ವದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣ ವ್ಯಾಪ್ತಿಯಲ್ಲಿ ಪ್ರತಿದಿನ ಸಾವಿರಾರು ಬೃಹತ್ ವಾಹನಗಳು, ಕಾರು, ರಿಕ್ಷಾ, ದ್ವಿಚಕ್ರ ವಾಹನಗಳು ಹಾಗೂ ಸಾವಿರಾರು ಪಾದಚಾರಿಗಳು ಸಂಚರಿಸುತ್ತಾರೆ. ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದು, ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿಯ ಎಡ ಪಕ್ಕಕ್ಕೆ ಆರು ಮತ್ತು ಬಲ ಭಾಗದಲ್ಲಿ ಏಳು ರಸ್ತೆಗಳಿವೆ. ಪ್ರಮುಖವಾಗಿ ಬಸ್ ನಿಲ್ದಾಣ, ಬ್ಯಾಂಕ್, ಸರ್ಕಾರಿ ಕಚೇರಿ, ಆಸ್ಪತ್ರೆ, ಶಾಲಾ, ಕಾಲೇಜುಗಳಿಗೆ ಹೋಗಿ ಬರುವ ರಸ್ತೆಗಳು ಇವೆ. ಮೇಲ್ಸೇತುವೆ, ಅಂಡರ್ ಪಾಸ್ ರಸ್ತೆಗಳು ಸರ್ವೀಸ್ ರಸ್ತೆಗಳು ಅತ್ಯಗತ್ಯವಾಗಿ ನಿರ್ವಣವಾಗಬೇಕು. ಈ ಮೇಲ್ಸೇತುವೆ ಬಗ್ಗೆ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಹಲವಾರು ಬಾರಿ ಒತ್ತಾಯಿಸುತ್ತ ಬಂದಿದ್ದಾರೆ. ಸರ್ಕಾರದ ಆಡಳಿತ ವ್ಯವಸ್ಥೆಯು ಜನರ ಜೀವದೊಂದಿಗೆ ಚೆಲ್ಲಾಟ ನಡೆಸದೇ ಆದಷ್ಟು ಬೇಗ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ ಅಧ್ಯಕ್ಷ ಜಿ.ಎನ್. ಗೌಡ, ಗ್ರಾಪಂ ಅಧ್ಯಕ್ಷ ಪೀಟರ್ ಮೆಂಡಿಸ್, ಕಾರ್ಯದರ್ಶಿ ಪ್ರಭು ಮಾಸ್ತಿ ಪಟಗಾರ, ಗೌರವಾಧ್ಯಕ್ಷ ಜೆ.ಟಿ. ಪೈ, ಖಜಾಂಚಿ ಜಗದೀಶ ನಾಯ್ಕ, ಪದಾಧಿಕಾರಿಗಳಾದ ಎಸ್.ಎನ್. ನಾಯಕ, ಎಂ.ಆರ್. ಹೆಗಡೆ, ಡಾ. ಎಸ್.ಡಿ. ಹೆಗಡೆ, ಶ್ರೀಪಾದ ನಾಯ್ಕ, ಎಸ್.ಕೆ. ಮೇಸ್ತ, ಎಡ್ವಿನ್ ಡಿಸೋಜ, ರಾಘು ಮೇಸ್ತ, ರಾಘು ನಾಯ್ಕ, ಇತರರಿದ್ದರು.