

ತುಮಕೂರು: ನಿನ್ನ ಅರ್ಹತೆಗೆ ಅನುಸಾರ ನಿನಗೆ ದೊರೆಯುವುದನ್ನು ತಡೆಯುವುದಕ್ಕೆ ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ, ನಿನ್ನನ್ನು ನೀನು ಅರಿತುಕೊಳ್ಳಬೇಕು. ಮನುಷ್ಯನ ನೈಜಸ್ಥಿತಿ ದಿವ್ಯತೆ ಎಂಬ ಸಂದೇಶವನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು ಎಂಬ ಸ್ವಾಮಿ ವಿವೇಕಾನಂದರ ವಾಣಿ ಸದಾ ಸ್ಮರಣೆಯಲ್ಲಿರಬೇಕು ಎಂದು ಗದಗ ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತೀ ಹೇಳಿದರು.
ತುಮಕೂರಿನ ರಾಮಕೃಷ್ಣ -ವಿವೇಕಾನಂದ ಆಶ್ರಮದಲ್ಲಿ ಗುರುವಾರ ಭಗವಾನ್ ಶ್ರೀರಾಮಕೃಷ್ಣ ವಿಶ್ವಭಾವೈಕ್ಯ ಮಂದಿರ ಮತ್ತು ಸ್ವಾಮಿ ವಿವೇಕಾನಂದ ಸಭಾಂಗಣದ ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸತ್ಸಂಗ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸ್ವಾಮಿ ವಿವೇಕಾನಂದರ ವಿಚಾರಗಳ ಬೆಳಕಿನಲ್ಲಿ ಪ್ರತಿಯೊಬ್ಬರಿಗೂ ಅವರವರ ಜವಾಬ್ದಾರಿ ಮನವರಿಕೆ ಮಾಡಿಕೊಡಬೇಕು. ವರ್ತಮಾನದಲ್ಲಿ ನಮ್ಮ ದೇಶಕ್ಕೆ ಬೇಕಿರುವುದು ಶಕ್ತಿ, ದಿವ್ಯತೆ, ಘನತೆ, ಸ್ವಾವಲಂಬನೆ. ಭಾರತ ಸ್ವಾಮಿ ವಿವೇಕಾನಂದರನ್ನು ನಿರ್ಲಕ್ಷಿಸಿದರೆ ನಾಶ ಹೊಂದುತ್ತದೆ. ಮೃತಸದೃಶವಾಗಿದ್ದ ಭಾರತದಲ್ಲಿ ಪ್ರಾಣಸಂಚಾರ ಮಾಡಿದವರು ಸ್ವಾಮಿ ವಿವೇಕಾನಂದರು ಎಂದರು.
ರಾಮಕೃಷ್ಣ ಮಹಾಸಂಘದ ಉಪಾಧ್ಯಕ್ಷ ಸ್ವಾಮಿ ಗೌತಮಾನಂದಜೀ ಮಹಾರಾಜ್ ಅವರು ಕೊಲ್ಕತ್ತಾ ಬೇಲೂರು ಮಠದಿಂದ ವಿಡಿಯೋ ಮೂಲಕ ಆಶೀರ್ವಚನ ನೀಡಿ, ತುಮಕೂರಿನ ಪವಿತ್ರ ನೆಲದಲ್ಲಿ ಆಶ್ರಮ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ನಿಮ್ಮ ದೈವಶ್ರದ್ಧೆ ಹಾಗೂ ಸೇವಾತತ್ಪರತೆಗಳು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು. ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ಮಂಗಳಾಥಾನಂದಜೀ ಮಹಾರಾಜ್ ಮಾತನಾಡಿ, ದಿವ್ಯತೆಯ ಮೂರ್ತಸ್ವರೂಪವಾಗಿದ್ದ ಶ್ರೀರಾಮಕೃಷ್ಣರ ತ್ಯಾಗ, ವೈರಾಗ್ಯ, ನಿಃಸ್ವಾರ್ಥತೆ, ಪವಿತ್ರತೆಯ ಉತ್ತುಂಗ ಆದರ್ಶವನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಂಡವರು ಸ್ವಾಮಿ ವಿವೇಕಾನಂದರು ಎಂದರು.
ರಘುಶರ್ಮ, ಗಂಗಾಧರಶಾಸ್ತ್ರಿ ಹಾಗೂ ಕೃಷ್ಣಮೂರ್ತಿ ಆಶ್ರಮದ ಪ್ರಾರ್ಥನಾ ಮಂದಿರದಲ್ಲಿ ಶ್ರೀಗಣಪತಿ ಹೋಮ ಮತ್ತು ಶ್ರೀದುರ್ಗಾಹೋಮ ನಡೆಸಿಕೊಟ್ಟರು.
ಚಿತ್ರದುರ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಬ್ರಹ್ಮನಿಷ್ಠಾನಂದಜೀ ಮಹಾರಾಜ್, ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪ್ರಣವಾನಂದಜೀ ಮಹಾರಾಜ್, ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಚಿದಾನಂದ ಎಂ.ಗೌಡ, ಪಾಲಿಕೆ ಸದಸ್ಯ ಮಂಜುನಾಥ್, ಆಯುಕ್ತೆ ರೇಣುಕಾ ಮತ್ತಿತರರು ಇದ್ದರು.