ಅಲೆಮಾರಿ ಸಮುದಾಯ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ನಿರ್ಲಕ್ಷಿಸಿದೆ

Pa. Mallesh
Published on

ಮೈಸೂರು: ನಿವೇಶನ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಏಕಲವ್ಯನಗರದ ನಿವಾಸಿಗಳು ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಜಿಲ್ಲಾಡಳಿತ ನಿರ್ಲಕ್ಷಿಸಿದೆ ಎಂದು ಹಿರಿಯ ಸವಾಜವಾದಿ ಪ.ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದರು.

ಕಸಬಾ ಹೋಬಳಿ ಶ್ಯಾದನಹಳ್ಳಿ ಸರ್ವೇ ನಂಬರ್ 37ರ ಸರ್ಕಾರಿ ಗೋಮಾಳವಾದ ಏಕಲವ್ಯನಗರದಲ್ಲಿ 13ಕ್ಕೂ ಹೆಚ್ಚು ವರ್ಷಗಳಿಂದ ವಾಸಿಸುತ್ತಿರುವ ಅಲೆಮಾರಿ ಸಮುದಾಯದವರು ತಮಗೆ ನಿವೇಶನ ಹಕ್ಕುಪತ್ರ ನೀಡಬೇಕೆಂದು 46 ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಟೆಂಟ್ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದಿನ ಜಿಲ್ಲಾಧಿಕಾರಿ ಒಮ್ಮೆ ಭೇಟಿ ನೀಡಿದ್ದನ್ನು ಬಿಟ್ಟರೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನೂತನ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ವೇಳೆ ಕೆಲದಿನ ಕಾಲಾವಕಾಶ ಕೇಳಿದ್ದಾರೆ. ಆ ಬಳಿಕವೂ ಹಕ್ಕುಪತ್ರ ನೀಡದಿದ್ದಲ್ಲಿ ಜಿಲ್ಲೆ ಹಾಗೂ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಈ ಅಲೆವಾರಿ ಸಮದಾಯದವರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನಚೀಟಿ, ವಿದ್ಯುತ್ ಹಾಗೂ ಕುಡಿಯುವ ನೀರು ಮೊದಲಾದ ಸೌಲಭ್ಯ ಒದಗಿಸಲಾಗಿದೆ. ಜತೆಗೆ ಇದು ಸರ್ಕಾರದ ಗೋಮಾಳವೂ ಆಗಿದೆ. ಇಲ್ಲಿನ 354 ಕುಟುಂಬಗಳಿಗೆ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯವರು ಪ್ರತ್ಯೇಕ ನೆಲಮನೆ ನಿರ್ಮಿಸಿಕೊಡುವ ಭರವಸೆ ನೀಡಿ ಕೆಲವರನ್ನು ಬಲವಂತವಾಗಿ ಸ್ಥಳಾಂತರಿಸಿದ್ದಾರೆ. ಇನ್ನುಳಿದವರು ಏಕಲವ್ಯನಗರದಲ್ಲೇ ವಾಸಿಸುತ್ತಿದ್ದಾರೆ ಎಂದರು.

ಅವರಿಗೆಂದು ಬಹುಮಹಡಿ ಸಮುಚ್ಚಯ ನಿರ್ಮಿಸಿದ್ದಾರೆ. ಆದರೆ ಇವರು ಕುರಿ, ಕೋಳಿ, ಹಸು ಸಾಕುವವರಾದ ಕಾರಣ ಅಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಈಗ ವಾಸಿಸುತ್ತಿರುವ ಕಡೆಯೇ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಸ್ವರಾಜ್ ಇಂಡಿಯಾದ ಉಗ್ರ ನರಸಿಂಹೇಗೌಡ, ಮುಖಂಡರಾದ ಜಿ.ರಾಜೇಂದ್ರ, ಮೋಹನ್‌ಕುವಾರ್‌ಗೌಡ, ಬಾಲಾಜಿ, ಚಂದ್ರಶೇಖರ ಮೇಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net