ಕಸ ವಿಲೇವಾರಿ ಘಟಕ ಇದ್ದರೂ ಸಮಸ್ಯೆ ತಪ್ಪಿಲ್ಲ: ಕಾಮಸಮುದ್ರದಲ್ಲಿ ರಸ್ತೆ ಬದಿಗಳಲ್ಲಿ ತ್ಯಾಜ್ಯದ ರಾಶಿ

budikote web
Published on

ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತದೆ. ಚರಂಡಿಗಳು ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಜನರಲ್ಲಿ ಆವರಿಸಿದೆ.
ಸ್ವಚ್ಛ ಭಾರತ್​ ಮಿಷನ್​ ಯೋಜನೆಯಡಿ ಗ್ರಾಪಂ ಮಟ್ಟದಲ್ಲಿ ಗ್ರಾಮಗಳಲ್ಲಿ ಸ್ವಚ್ಛತೆಗಾಗಿ ತಾಲೂಕಿನ 21 ಗ್ರಾಪಂಗಳಲ್ಲಿ ಸ್ವಚ್ಛ ಸಂಕೀರ್ಣ (ಘನ ತ್ಯಾಜ್ಯ ವಿಲೇವಾರು ಘಟಕ)ಗಳನ್ನು ಆರಂಭಿಸಲು ಸರ್ಕಾರ ಜಿಪಂ ಮೂಲಕ ಯೋಜನೆ ರೂಪಿಸಿದೆ. ಪಂಚಾಯಿತಿ ವ್ಯಾಪ್ತಿಯ ಪ್ರತಿ ಗ್ರಾಮದ ಮನೆ ಮನೆಯಿಂದ ಹಸಿ ಹಾಗೂ ಒಣ ತ್ಯಾಜ್ಯ ವಿಂಗಡಿಸಿ ಕಸ ಸಂಗ್ರಹಣೆ ಮಾಡಲಾಗುತ್ತದೆ. ಸಂಗ್ರಹಿಸಿದ ಕಸ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿದ ಘನ ತ್ಯಾಜ್ಯ ನಿರ್ವಹಣೆ ಘಟಕದ ಮೂಲಕ ಪ್ಲಾಸ್ಟಿಕ್​, ಕಬ್ಬಿಣ, ಗಾಜು ಇತ್ಯಾದಿಗಳನ್ನು ವಿಂಗಡಣೆ ಮಾಡಿ ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಆದರೆ ಯೋಜನೆ ಆರಂಭಿಸಿ ವರ್ಷಗಳೇ ಕಳೆದರೂ ಇನ್ನೂ ಹಲವು ಗ್ರಾಪಂಗಳ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಇದಕ್ಕೆ ಅಧಿಕಾರಿಗಳ ರ್ನಿಲಕ್ಷ$್ಯವೇ ಕಾರಣವಾಗಿದೆ.


ರಸ್ತೆಯಲ್ಲಿಯೇ ಚರಂಡಿ ನೀರು: ಹೋಬಳಿ ಕೇಂದ್ರವಾಗಿರುವ ಕಾಮಸಮುದ್ರದಲ್ಲಿ 3 ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಗ್ರಾಮದ ಬಲಮಂದೆ ಮಾರ್ಗದ ರಸ್ತೆ, ಅಂಬೇಡ್ಕರ್​ ಕಾಲನಿ, ಸಂತೆ ಬೀದಿಯ ಮುಖ್ಯ ರಸ್ತೆ, ಪೊಲೀಸ್​ಠಾಣೆ ರಸ್ತೆ, ಬ್ರಾಹ್ಮಣ ಬೀದಿಗಳಲ್ಲಿ ಎರಡು ಕಡೆಯ ಚರಂಡಿಗಳು ತುಂಬಿ ಹರಿಯದೆ ದುರ್ನಾತ ಬೀರುತ್ತಿದೆ. ಗ್ರಾಮದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿರುವ ಚರಂಡಿಗಳಲ್ಲಿ ಗಿಡ ಗಂಟಿಗಳು, ಹುಲ್ಲು ಬೆಳೆದಿವೆ. ಮಳೆನೀರು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ, ರಸ್ತೆಯಲ್ಲಿಯೇ ಚರಂಡಿಯ ಕೊಳಚೆ ನೀರು ಹರಿಯುತ್ತಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.


ಕಸ ಸಂಗ್ರಹಣೆಗೆ ಬಾರದ ವಾಹನ: ನಾಲ್ಕೈದು ತಿಂಗಳಿನಿಂದ ಕಸ ಸಂಗ್ರಹಣೆ ಮಾಡುವಂತಹ ವಾಹನಗಳು ಸಂಚರಿಸದ ಕಾರಣ ಗ್ರಾಮಸ್ಥರು ಮನೆ ಹಾಗೂ ಅಂಗಡಿಗಳಿಂದ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದರಿಂದಾಗಿ ಗ್ರಾಮದಿಂದ ತೊಪ್ಪನಹಳ್ಳಿ ಮಾರ್ಗದ ರಸ್ತೆ, ಬಲಮಂದೆ ರಸ್ತೆ, ಬಸ್​ನಿಲ್ದಾಣದ ಅಕ್ಕ ಪಕ್ಕದ ರಸ್ತೆಯ ಬದಿ ಕಸದ ರಾಶಿಯಿಂದ ಕೊಡಿದೆ. ಸೊಳ್ಳೆ ಮತ್ತು ನೊಣಗಳ ಕಾಟ ಹೆಚ್ಚಿದೆ. ಜನರು ಸಾಂಕ್ರಾಮಿಕ ರೋಗಕ್ಕೆ ಒಳಗಾಗುತ್ತಿದ್ದಾರೆ. ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದರೆ ಮಳೆ ನೀರು ಸರಾಗವಾಗಿ ಹರಿಯಲು ಯಾವುದೇ ಮುಂಜಾಗ್ರತೆ ಕ್ರಮ ಅನುಸರಿಸಿಲ್ಲ. ಮಳೆ ನೀರು ಚರಂಡಿ ತುಂಬಿ ಮನೆಗಳಿಗೆ ನುಗ್ಗಿದರೂ ಅಚ್ಚರಿ ಇಲ್ಲ.


ಬಳಕೆಯಾಗದ ಘನ ತ್ಯಾಜ್ಯ ಸಂಸ್ಕರಣ ಘಟಕ: ಲಕ್ಷಾಂತರ ರೂ. ವೆಚ್ಚ ಮಾಡಿ ಪಂಚಾಯಿತಿಯಿಂದ ಘನತ್ಯಾಜ್ಯ ಸಂಸ್ಕರಣೆ ಘಟಕ ನಿಮಾರ್ಣ ಮಾಡಲಾಗಿದೆ. ಆರಂಭದಲ್ಲಿ ಗ್ರಾಮದ ಜನತೆಯಿಂದ ಕಸ ಸಂಗ್ರಹಣೆ ಮಾಡಲಾಗುತ್ತಿತ್ತು. ಹಲವು ತಿಂಗಳುಗಳಿಂದ ಕಸ ಸಂಗ್ರಹಣೆ ಮಾಡದ ಕಾರಣ ಜನರು ಕಸ ಎಲ್ಲೆಂದರಲ್ಲಿ ಎಸೆಯುತ್ತಿರುವರು. ಕೇವಲ ಹೆಸರಿಗಷ್ಟೇ ಘನ ತ್ಯಾಜ್ಯ ಸಂಸ್ಕರಣೆ ಟಕ ಇದೆಯಷ್ಟೇ ಎಂಬುದು ಸ್ಥಳಿಯರ ದೂರು.

ಕಸ ಸಂಗ್ರಹಣೆ ಮಾಡುವ ವಾಹನ ಕೆಟ್ಟು ನಿಂತಿದೆ. ಹಾಗಾಗಿ ಗ್ರ್ರಾಮದ ಮನೆಗಳಿಂದ ಕಸ ಸಂಗ್ರಹಣೆ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಜನ ಎಲ್ಲೆಂದಲ್ಲಿ ಕಸ ಎಸೆಯುತ್ತಿದ್ದಾರೆ. ಪಂಚಾಯಿತಿಯಿಂದ ಕಸ ತೆರವು ಮಾಡುವ ಕೆಲಸ ಮಾಡುವುದರ ಜತೆಗೆ ಚರಂಡಿಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಆದಷ್ಟು ಬೇಗ ಕಸ ಸಂಗ್ರಹಣೆ ವಾಹನ ದುರಸ್ತಿ ಮಾಡಿಸಿ ನೇರವಾಗಿ ಮನೆಗಳಿಂದ ಕಸ ಸಂಗ್ರಹಿಸಿ ಸ್ವಚ್ಛತೆ ಕಾಪಾಡಲಾಗುತ್ತದೆ.
| ಆದಿನಾರಾಯಣ (ಕುಟ್ಟಿ)ಗ್ರಾಪಂ ಅಧ್ಯಕ್ಷ, ಕಾಮಸಮುದ್ರ

ಕಾಮಸಮುದ್ರ ಗ್ರಾಮದಲ್ಲಿ ಹಲವು ತಿಂಗಳುಗಳಿಂದ ಪಂಚಾಯಿತಿಯವರು ಕಾಮಸಮುದ್ರ ಹಾಗೂ ಸುತ್ತಮುತ್ತಲಿನ ಗ್ರಾಮದ ಮನೆಗಳಿಂದ ಕಸ ಸಂಗ್ರಹಣೆ ಮಾಡದ ಕಾರಣ ಗ್ರಾಮದಲ್ಲಿ ದುರ್ನಾತ ಬೀರುತ್ತಿದೆ. ಗ್ರಾಮದ ನೈರ್ಮಲ್ಯ ಕಾಪಾಡುವಲ್ಲಿ ಗ್ರಾಪಂ ಅಧಿಕಾರಿಗಳು ಎಡವಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕಸ ಸಂಗ್ರಹಣೆ ಮಾಡುವುದರ ಜತೆಗೆ ಮಳೆಗಾಲ ಎದುರಿಸಲು ಸನ್ನದ್ಧರಾಗಬೇಕು.
| ಎಸ್​.ಯಲ್ಲಪ್ಪ, ವಟ್ಟಿಗಲ್ಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net