

ಕೊಪ್ಪ: ಚುನಾವಣೆಯಲ್ಲಿ ನಾನು ಸೋಲು ಕಂಡಿದ್ದರೂ ಕ್ಷೇತ್ರಾದ್ಯಂತ ಸಂಚಾರ ಮಾಡುತ್ತ, ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ ಚಲಾವಣೆಯಲ್ಲಿದ್ದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಪುರಭವನದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷ ಸಂಸದರಾದವರು ಕ್ಷೇತ್ರಕ್ಕೆ ಭೇಟಿಯನ್ನೂ ನೀಡಲಿಲ್ಲ. ನೀವು ಅಭ್ಯರ್ಥಿ ನೋಡಿ ಮತ ಹಾಕದ ಕಾರಣ ಗೆದ್ದ ಅಭ್ಯರ್ಥಿ ಕ್ಷೇತ್ರದ ಕಡೆ ಮುಖ ಮಾಡಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಈ ಹಿಂದೆ ಗೋರಖ್ ಸಿಂಗ್ ವರದಿ ಜಾರಿಯಾಗಲಿಲ್ಲ ಎಂದು ಹೋರಾಟ ಮಾಡುತ್ತಿದ್ದವರು, ಅವರದೇ ಸರ್ಕಾರ ಇದ್ದಾಗ ವರದಿ ಬಗ್ಗೆ ಕಳೆದ 10 ವರ್ಷಗಳಲ್ಲಿ ಚರ್ಚೆಯೇ ಮಾಡಲಿಲ್ಲ. ಯಾವುದೇ ಸಂಸದರು ಕಡತದ ಹಿಂದೆ ಹೋಗದಿದ್ದರೆ ಕೆಲಸ ಆಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ನನ್ನ 20 ತಿಂಗಳ ಅವಧಿಯಲ್ಲಿ ಏನು ಕೆಲಸವಾಗಿದೆ ಮತ್ತು ನಂತರದ ಅವಧಿಯಲ್ಲಿ ಏನು ಕೆಲಸವಾಗಿದೆ ಎಂದು ತುಲನೆ ಮಾಡಿ ನೋಡಿ. ಒಮ್ಮೆ ಮತ ಹಾಕಿ ಇನ್ನೊಂದು ಚುನಾವಣೆವರೆಗೆ ಬೈಯುತ್ತಾ ಕೂರಬೇಡಿ ಎಂದರು.
ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ಕುಮಾರ್ ಸೊರಕೆ ಮಾತನಾಡಿ, ಉಡುಪಿಯಲ್ಲಿ ನಾಯಕತ್ವ ಶಿಥಿಲ ಉಂಟಾದಾಗ ಜಯಪ್ರಕಾಶ್ ಹೆಗ್ಡೆ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ನಾರಾಯಣ ಗುರು ಸ್ತಬ್ಧಚಿತ್ರ ಕೇಂದ್ರ ತಿರಸ್ಕರಿಸಿದ್ದಾಗ, ಗುರುಗಳ ಸಂದೇಶವನ್ನು ಪಠ್ಯದಿಂದ ತೆಗೆದು ಹಾಕಿದ್ದಾಗ ಕೋಟ ಶ್ರೀನಿವಾಸ ಪೂಜಾರಿ ಮೌನ ವಹಿಸಿದ್ದರು ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಭಾವನೆ ಮತ್ತು ಬದುಕು, ಸತ್ಯ ಮತ್ತು ಅಸತ್ಯದ ನಡುವಿನ ಚುನಾವಣೆ ಇದಾಗಿದೆ. ಬಿಜೆಪಿ ಲಂಚವನ್ನು ಅಕೌಂಟ್ ಮೂಲಕ ಪಡೆಯುವುದನ್ನು ಆರಂಭಿಸಿತು. ಸುಪ್ರೀಂಕೋರ್ಟ್ ಛೀಮಾರಿ ಹಾಕಿದಾಗ ಮಾನ, ಮರ್ಯಾದೆ ಇದ್ದವರು ರಾಜೀನಾಮೆ ಕೊಟ್ಟು ಹೊರಬರಬೇಕಿತ್ತು. ಕೋರ್ಟ್‌ನಲ್ಲಿ ಜನಪರವಾಗಿ ವಕಾಲತ್ತ ವಹಿಸುವ, ಸಂಸತ್‌ನಲ್ಲಿ ಜನಪರ ಧ್ವನಿ ಎತ್ತುವ ಜಯಪ್ರಕಾಶ್ ಹೆಗ್ಡೆ ಆಯ್ಕೆಯಾಗಬೇಕು ಎಂದರು.
ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಮಾತನಾಡಿ, ಬಿಜೆಪಿ ಸೋಲುವ ಭಯದಿಂದ ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿಯನ್ನು ಜೈಲಿಗೆ ಹಾಕುವ ಕೆಲಸ ಮಾಡಿದೆ. ಜಯಪ್ರಕಾಶ್ ಹೆಗ್ಡೆ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಜಯಪ್ರಕಾಶ್ ಹೆಗ್ಡೆ ಅವರನ್ನು ಲೋಕಸಭೆಗೆ, ನನ್ನನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ. ಎನ್.ಪಿ.ಎಸ್ ಜಾರಿಗೆ ಕೇಂದ್ರದಲ್ಲಿ ಪ್ರಬಲವಾಗಿ ಮಾತನಾಡಬಲ್ಲ ಅಭ್ಯರ್ಥಿ ಬೇಕಾಗಿದ್ದು, ಜಯಪ್ರಕಾಶ್ ಹೆಗ್ಡೆ ಸಮರ್ಥರಿದ್ದಾರೆ ಎಂದು ಮನವಿ ಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳೆಮನೆ ನಟರಾಜ್, ಮುಖಂಡರಾದ ಸುಧೀರ್ ಕುಮಾರ್ ಮುರೊಳ್ಳಿ, ಶಿವಾನಂದ ಸ್ವಾಮಿ, ಎಚ್.ಎಂ.ಸತೀಶ್, ಕೆ.ಜಿ.ಶೋಭಿಂತ್, ಕುಕ್ಕುಡಿಗೆ ರವೀಂದ್ರ, ಡಿ.ಎಸ್.ವಿಶ್ವನಾಥಶೆಟ್ಟಿ ಇತರರಿದ್ದರು.