

ಚಿಕ್ಕಬಳ್ಳಾಪುರ: ಕಳೆದ ಸಾಲಿಗೆ ಹೋಲಿಸಿದ್ದಲ್ಲಿ 1 ರಿಂದ 10 ನೇ ತರಗತಿಗೆ ದಾಖಲಾತಿ ಪೈಕಿ 4310 ಮಕ್ಕಳ ಸಂಖ್ಯೆಯು ಕಡಿಮೆಯಾಗಿದೆ. 2023-24 ನೇ ಸಾಲಿನಲ್ಲಿ 1,72,202 ಮಕ್ಕಳು, ಪ್ರಸಕ್ತ 2024-25 ನೇ ಸಾಲಿನಲ್ಲಿ 165760 ಮಕ್ಕಳು ದಾಖಲಾಗಿದ್ದು 4310 ವ್ಯತ್ಯಾಸ ಕಂಡು ಬಂದಿದೆ. ಜಿಲ್ಲೆಯಲ್ಲಿ 879 ಸರ್ಕಾರಿ, 43 ಅನುದಾನಿತ, 99 ಖಾಸಗಿ, ಸಮಾಜ ಇಲಾಖೆ 4, ಇತರೆ 4 ಸೇರಿದಂತೆ 1546 ಪ್ರಾಥಮಿಕ ಶಾಲೆಗಳು, 111 ಸರ್ಕಾರಿ, 41 ಅನುದಾನಿತ, 155 ಖಾಸಗಿ, ಸಮಾಜ ಕಲ್ಯಾಣ 24, ಕೇಂದ್ರೀಯ/ನವೋದಯ 2 ಸೇರಿದಂತೆ 333 ಪ್ರೌಢಶಾಲೆಗಳಿವೆ.
*ಸಮೀೆಕ್ಷೆಯ ವರದಿ
ಜಿಲ್ಲೆಯಲ್ಲಿ 2023-24 ನೇ ಸಾಲಿಗೆ ಕೈಗೊಂಡ ಸಮೀೆಯಲ್ಲಿ 179 ಮಕ್ಕಳು ಶಾಲೆಯಿಂದ ಹೊರ ಗುಳಿದಿರುವುದು ಪತ್ತೆಯಾಗಿದ್ದು ಈ ಪೈಕಿ 73 ಮಕ್ಕಳು ಮಾತ್ರ ಮರು ದಾಖಲಾಗಿದ್ದಾರೆ. ಉಳಿದ 106 ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಯತ್ನಿಸಲಾಗಿದೆ.
ಸರ್ಕಾರಿ ವಿವಿಧ ಸವಲತ್ತುಗಳು, ಉಚಿತ ಶಿಕ್ಷಣ ಕಾಯ್ದೆ ಜಾರಿ ನಡುವೆಯೂ ಮಕ್ಕಳು ಕಲಿಕೆಯಿಂದ ದೂರ ಉಳಿಯುವಂತಹುದು ಕಂಡು ಬರುತ್ತಿದೆ. ಇದಕ್ಕೆ ನಿರಂತರ ಪಾಲಕರ ವಲಸೆ, ಕಲಿಕೆಯಲ್ಲಿ ಹಿಂದುಳಿದಿರುವ ನಿರುತ್ಸಾಹದಲ್ಲಿ ಮಕ್ಕಳು ಬಾರದಿರುವುದು, ಬಡತನ, ಅರಿವಿನ ಕೊರತೆಯು ಪ್ರಮುಖ ಕಾರಣ ಎನ್ನಲಾಗುತ್ತಿದೆ.
*ದಾಖಲಾಗದವರು, ಬಿಟ್ಟ ಮಕ್ಕಳು
7 ಬಾಲಕರು, 5 ಬಾಲಕಿಯರು ಸೇರಿ 12 ಮಕ್ಕಳು ಶಾಲೆಗೆ ದಾಖಲಾಗಿಲ್ಲ. ಹಾಗೆಯೇ 110 ಬಾಲಕರು, 57 ಬಾಲಕಿಯರು ಸೇರಿ 167 ಮಕ್ಕಳು ಶಾಲೆ ಬಿಟ್ಟಿದ್ದಾರೆ. ಇನ್ನೂ 6 ರಿಂದ 14 ವಯೋಮಾನದವರಿಗೆ ಸಂಬಂಧಿಸಿದಂತೆ 95 ಬಾಲಕರು, 57 ಬಾಲಕಿಯರು ಸೇರಿ 152 ಮಕ್ಕಳು ಶಾಲೆಗೆ ದಾಖಲಾಗಿಲ್ಲ. 15 ರಿಂದ 18 ವರ್ಷ ವಯೋಮಾನಕ್ಕೆ ಸಂಬಂಧಿಸಿದಂತೆ 22 ಬಾಲಕರು ಮತ್ತು 5 ಬಾಲಕಿಯರು ಸೇರಿದಂತೆ 27 ಮಕ್ಕಳು ಶಾಲೆ ಬಿಟ್ಟಿದ್ದಾರೆ.
*ಖಾಸಗಿ ವ್ಯಾಮೋಹ
ವರ್ಷದಿಂದ ವರ್ಷಕ್ಕೆ ಖಾಸಗಿ ಶಾಲೆಗಳ ಕಡೆಗೆ ಪಾಲಕರ ವ್ಯಾಮೋಹ ಹೆಚ್ಚಾಗಿದೆ. ದುಬಾರಿ ಶುಲ್ಕವನ್ನು ಪಾವತಿಸಿ, ದಾಖಲಿಸುತ್ತಿದ್ದಾರೆ. ಇದಕ್ಕೆ ಆಂಗ್ಲ ಭಾಷಾ ಮಾಧ್ಯಮ ಒಲವು ಪ್ರಮುಖ ಕಾರಣ. ಬೇಡಿಕೆಯನ್ನಾಧಾರಿಸಿ ವಿವಿಧೆಡೆ ಹೊಸ ಖಾಸಗಿ ಶಾಲೆಗಳು ತಲೆ ಎತ್ತುತ್ತಿವೆ. ಮತ್ತೊಂದೆಡೆ ಸರ್ಕಾರಿ ಶಾಲೆಗಳಲ್ಲಿ ಅಭಿವೃದ್ಧಿ ಕೆಲಸಗಳ ನಿರ್ವಹಣೆ, ಮೂಲ ಸೌಕರ್ಯಗಳನ್ನು ಒದಗಿಸುವಂತಹುದರಲ್ಲಿ ನಿಧಾನಗತಿಯ ಪ್ರಗತಿ ಇದೆ. ಬಹುತೇಕ ಕಡೆ ಶಿಕ್ಷಕರ ಕೊರತೆ ಇದೆ. ಇದರ ಅರಿವಿದ್ದರೂ ಭರ್ತಿಗೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನೂ ಪರಿಣಾಮಕಾರಿ ಕಲಿಕಾ ಬೋಧನೆಯ ಸಾಮರ್ಥ್ಯದ ಪ್ರತಿಭಾವಂತರ ಮೇಲೆ ಶಿಕ್ಷಣಕ್ಕಿಂತಲೂ ಶೈಕ್ಷಣಿಕೇತರ ಚಟುವಟಿಕೆ ಹೊರೆ ಬೀಳುತ್ತಿದೆ.
*ದಾಖಲಾತಿ ಆಂದೋಲನಗಳು
ವಾರ್ಷಿಕ ಪರೀೆಗಳು ಮುಗಿಯುತ್ತಿದ್ದಂತೆ ಖಾಸಗಿ ಶಾಲೆಗಳು ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿ, ಮಕ್ಕಳನ್ನು ಸೇರಿಸಿಕೊಳ್ಳುತ್ತವೆ. ಸರ್ಕಾರಿ ಶಾಲೆಗಳು ಬೇಸಿಗೆ ರಜೆ ಮುಗಿದು, ಜೂನ್ ಮೊದಲ ವಾರದಲ್ಲಿ ಸಾಮಾನ್ಯ ದಾಖಲಾತಿ ಆಂದೋಲನ, ಜುಲೈ ಬಳಿಕ ವಿಶೇಷ ದಾಖಲಾತಿ ಆಂದೋಲನ ಕೈಗೊಳ್ಳುತ್ತದೆ. ಈ ವಿಧಾನದಲ್ಲಿ ಪ್ರತಿ ವರ್ಷ ಖಾಸಗಿ ಶಾಲೆಗಳಿಗೆ ಸೇರದೇ ಉಳಿದಿರುವ ಮಕ್ಕಳು ಸರ್ಕಾರಿ ಶಾಲೆಯ ಪಾಲು ಎನ್ನುವಂತಾಗಿದೆ.