

ಸಂಕೇಶ್ವರ: ದೇಸಿ ಕುಸ್ತಿ ಕಲೆ ಶ್ರೀಮಂತಿಕೆಯ ಪ್ರತೀಕವಾಗಿದ್ದು, ಸದಢ ಶರೀರಕ್ಕಾಗಿ ಶಾಲಾ ಶಿಕ್ಷಣದಲ್ಲಿ ಕುಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಸಮೀಪದ ಅಮ್ಮಣಗಿ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜಿಲ್ಲೆಯಲ್ಲಿ ಕುಸ್ತಿ ತರಬೇತಿ ಕೇಂದ್ರ ಆರಂಭಿಸುವ ಮೂಲಕ ದೇಸಿ ಕ್ರೀಡೆಗೆ ಉತ್ತೇಜನ ನೀಡಬೇಕು. ಜಾತ್ರಾ ಮಹೋತ್ಸವಗಳು ಪರಸ್ಪರ ಸ್ನೇಹ-ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಿದ್ದು, ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಕುಸ್ತಿ ನಿಖಾಲಿ ಆಯೋಜಿಸುವ ಮೂಲಕ ಪ್ರತಿಭೆ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದರು.
ವಿವಿಧ ಭಾಗಗಳಿಂದ ಆಗಮಿಸಿದ್ದ ಕುಸ್ತಿಪಟುಗಳು ಅಖಾಡದಲ್ಲಿ ಸೆಣಸಾಡಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮಕರ ಸಂಕ್ರಾಂತಿ ಸುಗ್ಗಿ ಸಂಭ್ರಮದಲ್ಲಿ ಅಂಗವಾಗಿ ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಾಶುಗರ್ ನಿವತ್ತ ವ್ಯವಸ್ಥಾಪಕ ನಿರ್ದೇಶಕ ಅಶೋಕ ಪಾಟೀಲ, ತಾತ್ಯಾಸಾಹೇಬ ಜಾಧವ, ಪ್ರಶಾಂತ ಪಾಟೀಲ, ಬಸವಣ್ಣಿ ನಾಗನೂರಿ, ಪ್ರಭು ಚಿಂಚೇವಾಡಿ ಇತರರಿದ್ದರು.