ದೇಸಿ ಕಲೆಗಳು ನಮ್ಮ ಸಂಸ್ಕೃತಿಯ ಮೇಲ್ಛಾವಣಿಗಳು

22 ಎಸ್ಕೆಪಿ 1b
ಶಿಕಾರಿಪುರದಲ್ಲಿ ಲಾವಣಿಕಾರ ಗಿಲಾನಿ, ಡಾ.ಶುಭಾ ಮರವಂತೆ ಅವರನ್ನು ಸನ್ಮಾನಿಸಲಾಯಿತು. ಆರ್.ಕೆ.ವಿನಯ್, ಕೆ.ಎಸ್.ಹುಚ್ರಾಯಪ್ಪ, ಬಿ.ಎಲ್.ರಾಜು, ಎಚ್.ಆರ್.ರಾಘವೇಂದ್ರ ಇತರರಿದ್ದರು.
Published on

ಶಿಕಾರಿಪುರ: ಲಾವಣಿ, ಗೀಗೀ ಪದ, ಜನಪದ ಗೀತೆ, ಡೊಳ್ಳು ಕುಣಿತ, ವೀರಗಾಸೆ, ಭಜನೆ ಸೇರಿ ಎಲ್ಲ ದೇಸಿ ಕಲೆಗಳು ನಮ್ಮ ಸಂಸ್ಕೃತಿಯ ಮೇಲ್ಛಾವಣಿಗಳು ಎಂದು ಉಪನ್ಯಾಸಕಿ ಡಾ. ಶುಭಾ ಮರವಂತೆ ಹೇಳಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜಾನಪದ ಪರಿಷತ್ ಮತ್ತು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆಯಲ್ಲಿ ಮಾತನಾಡಿ, ಈ ಮಣ್ಣಿನ ಸೊಗಡು ಕ್ರಮೇಣ ಕಡಿಮೆಯಾಗುತ್ತಿದೆ. ದೇಸಿ ಕ್ರೀಡೆಗಳು, ಆಹಾರ ಪದ್ಧತಿ, ಹಬ್ಬ ಹರಿದಿನಗಳು, ಸೋಬಾನೆ ಪದ, ಜೋಗಿ ಪದ, ದೊಡ್ಡಾಟ, ಸಣ್ಣಾಟದಂತಹ ಈ ನೆಲದ ಜೀವಂತಿಕೆಯ ಸಾಕ್ಷಿಗಳು ನಶಿಸಿಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ರೊಟ್ಟಿ, ಮುದ್ದೆ ತಿಂದು ಗಟ್ಟಿಯಾಗಿದ್ದ ನಮ್ಮ ಜನ ಜಂಕ್ ಫುಡ್ ದಾಸರಾಗುತ್ತಿದ್ದಾರೆ. ಇದರಿಂದ ಹತ್ತು ಹಲವು ಕಾಯಿಲೆಗಳಿಗೆ ನಾವೇ ಆಹ್ವಾನ ಕೊಟ್ಟಂತಾಗುತ್ತಿದೆ. ಬೆಳೆಗಳಲ್ಲಿಯೂ ದೇಸಿ ತಳಿಗಳು ದೂರವಾಗುತ್ತಿವೆ. ಮಿತಿ ಮೀರಿದ ರಸಗೊಬ್ಬರ ಬಳಕೆಯಿಂದ ನಾವು ತಿನ್ನುವ ಆಹಾರದಲ್ಲಿ ಸತ್ವ ಮತ್ತು ಶಕ್ತಿಯೇ ಇಲ್ಲದಂತಾಗಿದೆ. ಹಿಂದಿನ ಆಹಾರ ಪದ್ಧತಿಯಿಂದ ನಮ್ಮ ಹಿರಿಯರು ಆರೋಗ್ಯಪೂರ್ಣರಾಗಿ ನೂರಕ್ಕೂ ಅಧಿಕ ವರ್ಷ ಬದುಕುತ್ತಿದ್ದರು. 50ರಿಂದ 60 ವರ್ಷ ಬುದುಕುವುದೇ ಕಷ್ಟವಾಗಿದೆ. ನಮ್ಮ ಮಣ್ಣಿನ ದೇಸಿ ಪದ್ಧತಿಗಳು ನಾಶವಾಗದಂತೆ ನೋಡಿಕೊಳ್ಳಬೇಕು. ಅವು ನಾಶವಾದರೆ ನಮ್ಮ ಸಂಸ್ಕೃತಿಯೂ ನಾಶವಾದಂತೆ ಎಂದರು.
ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ ಮಾತನಾಡಿ, ನಮ್ಮ ತಾಲೂಕಿನ ಖ್ಯಾತ ಲಾವಣಿಕಾರ ದಿ. ಪುನೇದಹಳ್ಳಿ ಸಮದ್ ಸಾಹೇಬರು ಅದ್ಭುತ ಗಾಯಕರಾಗಿದ್ದರು. ಸಂತೆಗಳಲ್ಲಿ ಬದುಕಿನ ಸಂತೆ ನಿರ್ವಹಣೆಗೆ ಸುಶ್ರಾವ್ಯವಾಗಿ ಹಾಡುತ್ತಿದ್ದರು. ಶಿಕಾರಿಪುರ, ಸೊರಬ, ಸಾಗರ, ಹೊನ್ನಾಳಿ, ಹಿರೇಕೆರೂರು, ರಾಣೆಬೆನ್ನೂರು, ದಾವಣಗೆರೆ ಸೇರಿ ನಾಡಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದರು. ಅವರು ಹಾಡುತ್ತಿದ್ದ ಲಾವಣಿಗಳು ಇಂದಿಗೂ ಪ್ರಸಿದ್ಧಿಯಾಗಿವೆ. ಅವರ ಮಗ ಕೂಡ ಒಬ್ಬ ಲಾವಣಿಕಾರ. ಇಂತಹ ಪ್ರತಿಭೆಗಳನ್ನು ನಾವು ಗುರುತಿಸಬೇಕು. ಇವರೆಲ್ಲರೂ ಬೇಲಿಯ ಹೂಗಳಂತೆ ಅರಳಿ ಬಾಡಿ ಹೋಗಬಾರದು. ಇವರ ಅದ್ಭುತವಾದ ಕಲೆ ಜನಮನಕ್ಕೆ ತಲುಪಬೇಕು ಎಂದು ಹೇಳಿದರು.
ಖ್ಯಾತ ಲಾವಣಿಕಾರ ಗಿಲಾನಿ ಲಾವಣೀಕರ್ ಲಾವಣಿ ಪದಗಳನ್ನು ಹಾಡಿ ನೆರೆದಿದ್ದವರ ರಂಜಿಸಿದರು. ಉಪನ್ಯಾಸಕ ಆರ್.ಕೆ.ವಿನಯ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಎಲ್.ರಾಜು, ಮಾಜಿ ಅಧ್ಯಕ್ಷ ಎಚ್.ಆರ್.ರಾಘವೇಂದ್ರ, ಉಪನ್ಯಾಸಕ ಸುನಿಲ್‌ಕುಮಾರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಆರ್.ರಘು, ಜಾನಪದ ಪರಿಷತ್ ಕಾರ್ಯದರ್ಶಿ ಸತ್ಯನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net