ದೇಶಪಾಂಡೆ ಸಿಎಂ ಆದರೆ ಒಳ್ಳೆಯದು

Bagina
Published on

ಶಿರಸಿ: ಆರ್.ವಿ. ದೇಶಪಾಂಡೆ ಮುಖ್ಯಮಂತ್ರಿಯಾದರೆ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ತಾಲೂಕಿನ ಬನವಾಸಿ ಬಳಿಯ ಗುಡ್ನಾಪುರ ಕೆರೆಗೆ ಸೋಮವಾರ ಬಾಗಿನ ಸಮರ್ಪಿಸಿ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆಗೆ ದಿ. ರಾಮಕೃಷ್ಣ ಹೆಗಡೆ ಅವರ ಬಳಿಕ ಮುಖ್ಯಮಂತ್ರಿ ಸ್ಥಾನ ಬಂದಿದೆ ಎಂದು ನಾವೆಲ್ಲ ಸಂತಸ ವ್ಯಕ್ತಪಡಿಸುತ್ತೇವೆ. ಇದರಲ್ಲಿ ರಾಜಕೀಯ ಪ್ರಶ್ನೆ ಬರುವುದಿಲ್ಲ. ಜಿಲ್ಲೆಯ ಸರ್ವಾಂಗೀಣ ಪ್ರಗತಿ ಆಗಬಹುದು, ಆಗಬೇಕು. ದೇಶಪಾಂಡೆ ಅವರು ಯಾವ ಹಿನ್ನೆಲೆಯಲ್ಲಿ ಈ ಮಾತನಾಡಿದ್ದಾರೆ ಗೊತ್ತಿಲ್ಲ.

ಕಾಂಗ್ರೆಸ್‌ನಲ್ಲಿ 136 ಶಾಸಕರಿದ್ದಾರೆ. ಯಾರಿಗೆ ಮುಖ್ಯಮಂತ್ರಿ ಸ್ಥಾನ ಎಂಬುದು ಆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
ಹಳಿಯಾಳ ಘಟನೆ ಕುರಿತು ಪ್ರತಿಕ್ರಯಿಸಿದ ಹೆಬ್ಬಾರ, ಬಿಜೆಪಿ ಶಿಸ್ತಿನ ಪಕ್ಷ ಎಂದುಕೊಂಡಿದೆ. ಶಿಸ್ತಿನ ಪಕ್ಷಕ್ಕೆ ಮುಂದೆ ಎಲ್ಲವೂ ಗೊತ್ತಾಗಲಿದೆ. ಬಸವನಗೌಡ ಪಾಟೀಲ ಯತ್ನಾಳ ವಿಧಾನಸಭೆಯ ಒಳಗೂ ಹೊರಗೂ ವಾಚಾಮಗೋಚರವಾಗಿ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ, ಅವರ ಮಗನ ಬಗ್ಗೆಯೂ ಮಾತನಾಡುತ್ತಿದ್ದಾರೆ. ಅವರಿಗೆ ಪಕ್ಷ ಏನು ಮಾಡಲು ಸಾಧ್ಯವಾಯಿತು? ನಮ್ಮಂತಹವರು ಮಾತನಾಡಿದರೆ ಸಿಟ್ಟು ಮಾಡುತ್ತಾರೆ. ಬಡವ ತಿಂದರೆ ಹೊಟ್ಟೆಗಿಲ್ಲದೆ ತಿಂದ, ಶ್ರೀಮಂತ ತಿಂದರೆ ಔಷಧಕ್ಕೆ ತಿಂದ ಎನ್ನುವ ಸ್ಥಿತಿ ಬಿಜೆಪಿಯಲ್ಲಿದೆ ಎಂದರು.

ಬನವಾಸಿ ಭಾಗಕ್ಕೆ ಉಪಯುಕ್ತವಾಗುವ ಸಲುವಾಗಿ ಕೆರೆ ತುಂಬುವ ಯೋಜನೆ ಜಾರಿಗೆ ತಂದಿದ್ದೆ. ಆದರೆ, ಗ್ರಿಡ್‌ಗೆ ವಿದ್ಯುತ್ ಸಂಪರ್ಕಕ್ಕೆ ಕೆಲ ತಾಂತ್ರಿಕ ತೊಡಕು ಉಂಟಾಗಿದ್ದರಿಂದ ಯೋಜನೆ ಇನ್ನೂ ಕಾರ್ಯ ಆರಂಭಿಸಿಲ್ಲ. ಶೀಘ್ರ ಸಮಸ್ಯೆ ಬಗೆಹರಿಯಲಿದೆ ಎಂಬ ಭರವಸೆ ಇದೆ ಎಂದ ಅವರು,

ಶಿವಮೊಗ್ಗ ಜಿಲ್ಲೆಯ ಜಡೆಯಿಂದ ಬನವಾಸಿ ಗ್ರಿಡ್‌ಗೆ ವಿದ್ಯುತ್ ಸಂಪರ್ಕ ಬರಲಿದೆ. ಖಾಸಗಿ ಜಾಗದಲ್ಲಿ 7 ಕಂಬ ಅಳವಡಿಸಬೇಕಿದ್ದು, ಇದಕ್ಕೆ ಅಲ್ಲಿಯ ರೈತರು ವಿರೋಧ ವ್ಯಕ್ತಪಡಿಸಿದ್ದರಿಂದ ಹಿನ್ನಡೆ ಉಂಟಾಗಿದೆ. ಶೀಘ್ರ ಈ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ. ವಿದ್ಯುತ್ ಸಂಪರ್ಕವಾದ ಬಳಿಕ ಎರಡನೇ ಹಂತದ ಕೆರೆ ನೀರು ತುಂಬುವ ಯೋಜನೆಯನ್ನೂ ಆರಂಭಿಸುತ್ತೇವೆ ಎಂದರು.

ಗುಡ್ನಾಪುರ ಕೆರೆ ತುಂಬಿದರೆ ಇಲ್ಲಿಯ ಸಾವಿರಾರು ಎಕರೆ ರೈತರ ಕೃಷಿಗೆ ಪೂರಕವಾಗಲಿದೆ. ಈ ವರ್ಷದ ಮಳೆಯಿಂದಾಗಿ ಕೆರೆ ಸಂಪೂರ್ಣ ತುಂಬಿದ್ದು, ಬೇಸಿಗೆಯಲ್ಲಿ ಇಲ್ಲಿಯ ಭೂಮಿಯಲ್ಲಿ ಸಮೃದ್ಧತೆ ಬರುವ ವಿಶ್ವಾಸವಿದೆ ಎಂದರು.

ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಸಿ.ಎಫ್. ನಾಯ್ಕ, ಗುಡ್ನಾಪುರ ಗ್ರಾಪಂ ಅಧ್ಯಕ್ಷ ರವಿ ಗುಡ್ನಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net