ದೇಶಿಹಳ್ಳಿ ಮಾರ್ಗವಿನ್ನು ದ್ವಿಪಥ

6 bangarpete 1
Published on

ಬಂಗಾರಪೇಟೆ: ವಿಶೇಷ ಅನುದಾನ ಯೋಜನೆಯಡಿ ಪುರಸಭೆ ವ್ಯಾಪ್ತಿಯ ದೇಶಿಹಳ್ಳಿ ಮುಖ್ಯರಸ್ತೆಯನ್ನು ದ್ವಿಮುಖ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ್​, ಪುರಸಭೆ ಅಧ್ಯಕ್ಷ ಗೋವಿಂದ, ಮುಖ್ಯಾಧಿಕಾರಿ ಸತ್ಯನಾರಾಯಣ, ಜೆಇ ರವಿಕುಮಾರ್​ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.

ದೇಶಿಹಳ್ಳಿ ರಸ್ತೆಗೆ ಲಿಂಕ್​ ಕಲ್ಪಿಸುವ ಕೆಜಿಎಫ್​ ಮುಖ್ಯರಸ್ತೆಯಿಂದ ರೈಲ್ವೆ ಗೇಟ್​ವರೆಗೆ ವಿಶೇಷ ಅನುದಾನ ಯೋಜನೆಯಡಿಯಲ್ಲಿ ಡಬಲ್​ ರಸ್ತೆ ಕಾಮಗಾರಿಗೆ ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ಸರ್ಕಾರದಿಂದ ಹಣ ಮಂಜೂರು ಮಾಡಿಸಿದ್ದು, ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ಕೈಗೆತ್ತಿಕೊಂಡಿದ್ದು ಸದ್ಯದಲ್ಲೇ ಕೆಲಸ ಪ್ರಾರಂಭಗೊಳ್ಳಲಿದೆ.

ಕಳೆದ ಏಳೆಂಟು ತಿಂಗಳ ಹಿಂದೆ ಪುರಸಭೆ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಅನುದಾನ ಯೋಜನೆಯಡಿಯಲ್ಲಿ ಮಂಜೂರು ಮಾಡಿಸಿದ್ದ ವಿವಿಧ ಅಭಿವೃದ್ಧಿ ಕೆಲಸಗಳಿಗೆ 47 ಕೋಟಿ ರೂ. ಕಾಮಗಾರಿಗೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಚಾಲನೆ ನೀಡಿದ್ದರು. ಈ ಕಾಮಗಾರಿಗಳ ಪೈಕಿ ದೇಶಿಹಳ್ಳಿ ಮುಖ್ಯರಸ್ತೆಯೂ ಒಂದಾಗಿದೆ.

ದೇಶಿಹಳ್ಳಿ ಮುಖ್ಯರಸ್ತೆಯಲ್ಲಿ ಬಂಗಾರಪೇಟೆ, ಕಾಮಸಮುದ್ರಂ, ಬಲಮಂದೆ, ತನಿಮಡುಗು, ತೊಪ್ಪನಹಳ್ಳಿ ಹಾಗೂ ಇತರೆ ಪ್ರಮುಖ ಗ್ರಾಮಗಳ ಮಧ್ಯೆ ತಮಿಳುನಾಡಿನ ಕೃಷ್ಣಗಿರಿ ಹೆದ್ದಾರಿಗೆ ಲಿಂಕ್​ ಕಲ್ಪಿಸುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಬೈಕ್​ ಮತ್ತು ಬಾರಿ ವಾಹನಗಳು ಸೇರಿ ಸಾವಿರಾರು ಜನರ ಓಡಾಟ ಇದೆ. ಸುಗಮ ಸಂಚಾರಕ್ಕಾಗಿ ಈಗಿರುವ ಏಕಮುಖ ರಸ್ತೆಯನ್ನು ಡಬಲ್​ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಶಾಸಕರು ಆಸಕ್ತಿ ತೋರಿದ್ದರು.

ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಡಬಲ್​ ರಸ್ತೆ ನಿಮಾರ್ಣಕ್ಕೆ ಸರ್ವೇ ನಡೆಸಿ ಎಡ&ಬಲ ಎರಡೂ ಕಡೆ ಗುರ್ತು ಮಾಡಿ ಒತ್ತುವರಿ ಮಾಡದಂತೆ ಎಚ್ಚರಿಕೆ ನೀಡಿದ್ದು, ಒಂದಿಬ್ಬರು ಒತ್ತುವರಿ ಮಾಡಿಕೊಂಡಿದ್ದ ರಸ್ತೆಯನ್ನು ಅಧಿಕಾರಿಗಳು ಸ್ಥಳದಲ್ಲೇ ಇದ್ದು ತೆರುವುಗೊಳಿಸಿದ್ದಾರೆ.

ದೂರದ ಹಳ್ಳಿಗಳಿಂದ ಬೆಳಗ್ಗೆ ಮತ್ತು ಸಂಜೆ ಹಾಗೂ ತಮ್ಮ ಕೆಲಸಗಳಿಗೆ ಹೋಗಿ ಬರಲು ನೂರಾರು ಸಂಖ್ಯೆಯಲ್ಲಿ ಬೈಕ್​ ಮುಖಾಂತರ ಬಂದು ಹೋಗುತ್ತಿರುವ ಸಂಖ್ಯೆ ದಿನೆ ದಿನೇ ಏರುತ್ತಿದೆ. ಅದರಲ್ಲೂ ಬೆಂಗಳೂರು ನಗರದ ಕಡೆ ಕೆಲಸಕ್ಕೆ ಬಂದು ಹೋಗುವವರೇ ಹೆಚ್ಚಾಗಿದ್ದಾರೆ. ಡಬಲ್​ ರಸ್ತೆ ಅಭಿವೃದ್ಧಿಯಿಂದ ಅಪಘಾತಗಳನ್ನು ತಪ್ಪಿಸುವ ಮೂಲಕ ಸುಗಮ ಸಂಚಾರಕ್ಕೆ ಬಹಳ ಅನುಕೂಲವಾಗಲಿದೆ.

ಶಾಸಕ ಎಸ.ಎನ್​.ನಾರಾಯಣಸ್ವಾಮಿ ಶ್ರಮದಿಂದ ದೇಶಿಹಳ್ಳಿ ಡಬಲ್​ ರಸ್ತೆ ಅಭಿವೃದ್ಧಿ ಆಗಲಿದೆ. ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಿರುವುದರಿಂದ ಶಾಸಕರ ಸೂಚನೆಯಂತೆ ಸ್ಥಳ ಪರಿಶೀಲನೆ ಮಾಡಲಾಗಿದೆ.

- ಸತ್ಯನಾರಾಯಣ

ಮುಖ್ಯಾಧಿಕಾರಿ, ಬಂಗಾರಪೇಟೆ

ಶಾಸಕರ ವಿಷೇಶ ಅನುದಾನದಡಿಯಲ್ಲಿ ದೇಶಿಹಳ್ಳಿ ಮುಖ್ಯರಸ್ತೆಯನ್ನು ಡಬಲ್​ ರಸ್ತೆಯನ್ನಾಗಿ ಮಾಡಲು ಅಗತ್ಯಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪುರಸಭೆ ವ್ಯಾಪ್ತಿಯ 600 ಮೀಟರ್​ ಉದ್ದ ಡಬಲ್​ ರಸ್ತೆ ನಿಮಾರ್ಣ ಮಾಡಲಾಗುವುದು.

- ಗೋವಿಂದ , ಅಧ್ಯಕ್ಷ, ಪುರಸಭೆ.

ದೇಶಿಹಳ್ಳಿ ಡಬಲ್​ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುತ್ತಿರುವುದು ಸಂತಸ ತಂದಿದೆ. ಹಲವು ವರ್ಷಗಳ ಕನಸ್ಸು ನನಸಾಗಿದೆ. ಡಬಲ್​ ರಸ್ತೆಯಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

- ರಾಜನ್​, ಪುರಸಭೆ ಸದಸ್ಯ, ದೇಶಿಹಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net