ಸಾಹಿತ್ಯ ಕ್ಷೇತ್ರಕ್ಕೆ ಹುಡಗಿ ಕೊಡುಗೆ ಅಪಾರ

nudi naman
Published on

ಬೀದರ್: ನಗರದ ರಾಣಿ ಚೆನ್ನಮ್ಮ ವೃತ್ತ (ಮೈಲೂರ ಕ್ರಾಸ್) ಹತ್ತಿರದ ಉಡುಪಿ ಹೋಟೆಲ್ ಮಹಾಲಕ್ಷ್ಮೀ ಸಭಾಂಗಣದಲ್ಲಿ ಶನಿವಾರ ಸಂಜೆ ಕದಂಬ ಕನ್ನಡ ಸಂಘ ಹಾಗೂ ನಾಟ್ಯಶ್ರೀ ನೃತ್ಯಾಲಯದಿಂದ ಹಿರಿಯ ಸಾಹಿತಿ, ಚಿಂತಕ ದಿ. ದೇಶಾಂಶ ಹುಡಗಿ ಅವರ ನುಡಿ ನಮನ ಕಾರ್ಯಕ್ರಮ ಜರುಗಿತು. ಹಲವರು ಮಾತನಾಡಿ, ಹುಡಗಿ ಅವರ ಆದರ್ಶ ಜೀವನ, ಮೌಲಿಕ ಚಿಂತನೆ, ಅಕ್ಷರ ಪ್ರೀತಿ, ಸಾಹಿತ್ಯ ಸಾಧನೆ ಮೇಲೆ ಬೆಳಕು ಚೆಲ್ಲಿದರು.

ಹಿರಿಯ ಪತ್ರಕರ್ತ ಸ.ದಾ. ಜೋಶಿ ಮಾತನಾಡಿ, ಬೀದರ್ ಕನ್ನಡ ಸಾಹಿತ್ಯಕ್ಕೆ ಹುಡಗಿ ಕೊಡುಗೆ ಅಪಾರವಿದೆ. ಅವರ ಆದರ್ಶ ಜೀವನ ಇಂದಿನ, ಮುಂದಿನ ಪೀಳಿಗೆಗೆ ಪ್ರೇರಣೆ ಆಗಬೇಕು. ಹೀಗಾಗಿ ಸಾಹಿತ್ಯ ಕ್ಷೇತ್ರದ ಸಮಾನ ಮನಸ್ಕರು ಸೇರಿ ನಗರದ ಯಾವುದಾದರೂ ಉದ್ಯಾನದಲ್ಲಿ ಅವರ ಪುತ್ಥಳಿ ನಿರ್ಮಿಸಬೇಕು. ರಾಜ್ಯೋತ್ಸವ ದಿನದಂದು ಸಾಹಿತ್ಯ ಕ್ಷೇತ್ರದ ಸಾಧಕರೊಬ್ಬರಿಗೆ ಜಿಲ್ಲಾಡಳಿತದಿಂದಲೇ ಪ್ರಶಸ್ತಿ ನೀಡುವಂತಾಗಬೇಕು. ನಗರದ ಪ್ರಮುಖ ರಸ್ತೆಗೆ ಅವರ ಹೆಸರಿಡುವುದು ಉತ್ತಮ ಎಂದು ಸಲಹೆ ನೀಡಿದರು.

ಇಂದಿನ ಹೆಚ್ಚಿನ ಯುವ ಸಾಹಿತಿಗಳಲ್ಲಿ ಅಧ್ಯಯನ, ಶಬ್ದ ಭಂಡಾರದ ಕೊರತೆ ಕಾಣುತ್ತಿದೆ. ಇಂಟರ್ನೆಟ್ ಮಾಹಿತಿ ಅವಲಂಬನೆ ಜಾಸ್ತಿ ಆಗುತ್ತಿದೆ. ಹೀಗಾಗಿ ಪ್ರಖರ ಚಿಂತನೆಗೆ ಹಚ್ಚುವ ಗಟ್ಟಿ ಸಾಹಿತ್ಯ ರಚನೆ ಪ್ರಮಾಣ ಕಮ್ಮಿಯಾಗಿದೆ. ಇಂದು ಸಾಹಿತಿ ಎನಿಸಿಕೊಳ್ಳಬೇಕು. ನಾಳೆ ಪುಸ್ತಕ ಹೊರತರಬೇಕು. ನಾಡಿದ್ದು ಸನ್ಮಾನ ಮಾಡಿಸಿಕೊಂಡು ಪ್ರಶಸ್ತಿ ಪಡೆದುಕೊಳ್ಳಬೇಕು. ಈ ಮನಸ್ಥಿತಿ ಬೆಳೆಯುತ್ತಿರುವುದು ಸಾಹಿತ್ಯ ಕ್ಷೇತ್ರಕ್ಕೆ ಒಳ್ಳೆಯದಲ್ಲ. ಸಾಹಿತ್ಯ ಕೃಷಿ ಹೇಗಿರಬೇಕು ಎಂಬುದಕ್ಕೆ ದೇಶಾಂಶ ಹುಡಗಿ ಅವರಂಥ ನಿದರ್ಶನ ಸಿಗುವುದು ವಿರಳ ಎಂದರು.

ಹುಡಗಿ ಅವರದ್ದು ಬಹುಮುಖಿ ಪ್ರತಿಭೆಯ ವ್ಯಕ್ತಿತ್ವ. ಸಾಹಿತಿ, ಕವಿ, ಲೇಖಕ, ಅನುವಾದಕ, ಪ್ರಕಾಶಕ, ನಿಘಂಟು ತಜ್ಞ ಹೀಗೆ ಸಾಹಿತ್ಯದ ಎಲ್ಲ ವಿಭಾಗಕ್ಕೂ ಅವಿಸ್ಮರಣೀಯ ಸೇವೆ ಸಲ್ಲಿಸಿದವರು. ಅವರ ಅಧ್ಯಯನ, ಜ್ಞಾನ ಭಂಡಾರ, ಶಬ್ದ ಭಂಡಾರ ಅಗಾಧ. ಅವರ ಕೃತಿಗಳು ಮೌಲಿಕವಾಗಿವೆ. 14 ವರ್ಷಗಳ ತಪಸ್ಸಿನ ಬಳಿಕ ಬೀದರ್ ಶಬ್ದಕೋಶ (ನಿಘಂಟು- ಡಿಕ್ಶನರಿ) ರಚಿಸಿ ಜಿಲ್ಲೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಈ ಶಬ್ದಕೋಶ ಜಿಲ್ಲೆಯ ಕನ್ನಡ ಪದಗಳಿಗೆ ಹೊಸ ಜೀವ ತುಂಬಿದೆ. ಸಮಾಜಕ್ಕೆ ಸದಾ ಮಾರ್ಗದರ್ಶಿಯಾಗಬಲ್ಲ ಒಂದು ಉತ್ತಮ ಕೃತಿ ರಚಿಸಲು ಸಾಹಿತಿಯಾದವರು ಎಷ್ಟೆಲ್ಲ ಶ್ರಮಪಡಬೇಕಾಗುತ್ತದೆ, ಏನೆಲ್ಲ ಅಧ್ಯಯನ ಮಾಡಬೇಕಾಗುತ್ತದೆ ಎಂಬುದಕ್ಕೆ ಈ ನಿಘಂಟು ಸಾಕ್ಷಿಯಾಗಿದೆ ಎಂದರು.

ಕದಂಬ ಕನ್ನಡ ಸಂಘದ ಗೌರವಾಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ದೇಶಾಂಶ ಹುಡಗಿ ಅವರು ಅತೀ ಕಠಿಣವಾದ ಬದುಕನ್ನು ಅತ್ಯಂತ ಸರಳವಾಗಿ ಬದುಕಿ ಆದರ್ಶ ಎನ್ನಿಸಿದರು. ತಮ್ಮ ಸುದೀರ್ಘ ಬದುಕನ್ನು ಕನ್ನಡ ಭಾಷೆ, ಸಾಹಿತ್ಯ, ಹಾಗೂ ಸಾಮಾಜಿಕ ಜೀವನಕ್ಕೆ ಸವೆಸಿ ಇಂದಿನ ಜನಾಂಗಕ್ಕೆ ಮಾದರಿ ಎನ್ನಿಸಿದ್ದಾರೆ. ಅವರ ಆದರ್ಶಗಳನ್ನು ಪಾಲಿಸಿ ಸಾಹಿತ್ಯ ಕ್ಷೇತ್ರದಲ್ಲಿ ಅವರನ್ನು ಚಿರಾಯುಗೊಳಿಸಬೇಕೆಂದು ಕರೆ ನೀಡಿದರು.

ಕದಂಬ ಕನ್ನಡ ಸಂಘದ ಅಧ್ಯಕ್ಷ ಡಾ.ವೀರಶೆಟ್ಟಿ ಮೈಲೂರಕರ್ ಮಾತನಾಡಿ, ದೇಶಾಂಶ ಹುಡಗಿ ಅವರು ಜಿಲ್ಲೆಯ ವರಕವಿ ಎನಿಸಿದ್ದಾರೆ. ಬಡತನ, ಸಮಾಜದ ಪಿಡಗುಗಳನ್ನು ತಮ್ಮ ಸಾಹಿತ್ಯದ ಮೂಲಕ ಜನ-ಮನಕ್ಕೆ ತಲುಪಿಸಿದ್ದಾರೆ ಎಂದು ಹೇಳಿದರು.

ಹಿರಿಯ ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್, ನಾಟ್ಯಶ್ರೀ ನೃತ್ಯಾಲಯ ನಿರ್ದೇಶಕಿ ರಾಣಿ ಸತ್ಯಮೂರ್ತಿ, ಹುಡಗಿ ಅವರ ಕುರಿತು ಸಂಶೋಧನೆ ಪ್ರಬಂಧ ಬರೆದಿರುವ ಸುಧಾರಾಣಿ ಮಾತನಾಡಿದರು. ರೇಣುಕಾ ಎನ್.ಬಿ ನಿರೂಪಣೆ ಮಾಡಿದರು.

ದೇಶಾಂಶ ಹುಡಗಿ ಅವರು ತಾವು ಸಾಹಿತ್ಯ ರಚಿಸುವ ಜತೆಗೆ ಇತರರಿಗೂ ಸಾಹಿತ್ಯ ರಚನೆಗೆ ಸ್ಫೂರ್ತಿ ನೀಡಿದ್ದರು. ಧರಿನಾಡು ಕನ್ನಡ ಸಂಘ ಸ್ಥಾಪಿಸಿ 150ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿ ವಿಶಿಷ್ಟ ಕೊಡುಗೆ ನೀಡಿದ್ದಾರೆ.| ಚಂದ್ರಪ್ಪ ಹೆಬ್ಬಾಳಕರ್ಹಿರಿಯ ಸಾಹಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net