ನಿವೇಶನ ಒದಗಿಸದಿದ್ರೆ ಗ್ರಾಪಂ ಬರಖಾಸ್ತು ಮಾಡಿ ; ದಿಶಾ ಸಮಿತಿ ಅಧ್ಯಕ್ಷ ಎ.ನಾರಾಯಣಸ್ವಾಮಿ ತಾಕೀತು ; ಅರ್ಹರಿಗೆ ಕೂಡಲೇ ವಸತಿ ಕಲ್ಪಿಸಿ

DSC_7400
Published on

ತುಮಕೂರು : ಗ್ರಾಮೀಣ ಭಾಗದ ನಿವೇಶನರಹಿತ ಬಡವರಿಗೆ ವಿವಿಧ ವಸತಿ ಯೋಜನೆಗಳಡಿ ನಿವೇಶನ ಒದಗಿಸದಿದ್ದಲ್ಲಿ ಅಂತಹ ಗ್ರಾಮ ಪಂಚಾಯಿತಿಗಳನ್ನು ಸೂಪರ್ ಸೀಡ್ ಮಾಡಲು ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಹಾಗೂ ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷ ಎ.ನಾರಾಯಣಸ್ವಾಮಿ ತಾಕೀತು ಮಾಡಿದರು. ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿ ವಿವಿಧ ಯೋಜನೆಗಳಲ್ಲಿ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅರ್ಹರಿಗೆ ಕೂಡಲೇ ವಸತಿ ಒದಗಿಸಿ ಎಂದು ಖಡಕ್ ಸೂಚನೆ ನೀಡಿದರು.

ಹಳ್ಳಿಗಳಲ್ಲಿ 2016 ರಿಂದ 2020ರವರೆಗೆ 8948 ಫಲಾನುಭವಿಗಳು ವಸತಿ ಸೌಲಭ್ಯಕ್ಕಾಗಿ ಆಯ್ಕೆಯಾಗಿದ್ದಾರೆ. ನಿಗದಿತ ಗುರಿ 9550ರಲ್ಲಿ 5436 ವಸತಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿವೆ. ಉಳಿದಂತೆ 884 ತಳಪಾಯ, 293 ಲಿಂಟಲ್ ಮಟ್ಟ, 419 ಛಾವಣಿ ಹಂತದಲ್ಲಿದ್ದು, 564 ನಿರ್ಮಾಣ ಕಾಮಗಾರಿಗಳು ಬಾಕಿ ಇವೆ. ಸೂರು ಒದಗಿಸಲು ನಿರ್ಲಕ್ಷೃ ತೋರುವ ಗ್ರಾಪಂಗಳನ್ನು ಸೂಪರ್‌ಸೀಡ್ ಮಾಡಲು ಕ್ರಮವಹಿಸುವಂತೆ ಜಿಪಂ ಸಿಇಒಗೆ ಆದೇಶಿಸಿದರು.

ತುಮಕೂರು ಪಾಲಿಕೆ ಸೇರಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಿಎಂ ಆವಾಸ್ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ 5710 ಫಲಾನುಭವಿಗಳಿಂದ ಬೇಡಿಕೆಗಳಿದ್ದು, ಈ ಪೈಕಿ 4479 ಮನೆಗಳಿಗೆ ಅನುಮೋದನೆ ದೊರೆತಿದೆ. ಅನುಮೋದನೆಗೊಂಡ ವಸತಿ ಕಾಮಗಾರಿಗಳ ಪೈಕಿ 1544 ಮನೆಗಳು ಪೂರ್ಣಗೊಂಡಿವೆ. ಉಳಿದಂತೆ 485 ತಳಪಾಯ, 315 ಛಾವಣಿ, 476 ಮೇಲ್ಛಾವಣಿ ಹಂತದಲ್ಲಿದ್ದು, 1258 ಮನೆಗಳು ಈವರೆಗೂ ಪ್ರಾರಂಭಗೊಂಡಿಲ್ಲ. ಇಂತಹ ನಿರ್ಲಕ್ಷೃ ಸಹಿಸಲು ಸಾಧ್ಯವಿಲ್ಲ ಎಂದರು.

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ತೆಂಗಿನ ಉತ್ಪನ್ನಗಳಿಗೆ ಸಂಬಂಧಿಸಿದ ಕಿರು ಉದ್ದಿಮೆ ಕೈಗೊಳ್ಳಲು ಸಾಲ ಸೌಲಭ್ಯಕ್ಕಾಗಿ 36 ಅರ್ಜಿಗಳು ಸ್ವೀಕೃತವಾಗಿದೆ. 9 ಫಲಾನುಭವಿಗಳಿಗೆ ಬ್ಯಾಂಕಿನಿಂದ ಸಾಲ ಮಂಜೂರಾಗಿದೆ. ಉಳಿದ 6 ಅರ್ಜಿಗಳಿಗೆ ಸಾಲ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 4 ಅರ್ಜಿಗಳು ಬ್ಯಾಂಕ್‌ನಿಂದ ತಿರಸ್ಕೃತಗೊಂಡಿವೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ 2021-22ನೇ ಸಾಲಿನಲ್ಲಿ 301694 ರೈತರ ಖಾತೆಗೆ 11842 ಲಕ್ಷ ರೂ.,ಗಳನ್ನು ನೇರವಾಗಿ ವರ್ಗಾಯಿಸಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ರಾಜ ಸುಲೋಚನಾ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ 519 ಹೊಸ ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದ್ದು ಈ ಪೈಕಿ 400 ಗ್ರಾಮಗಳು ಪ್ರಾಥಮಿಕ ಹಾಗೂ 112 ಗ್ರಾಮಗಳು ಅಂತಿಮ ಅಧಿಸೂಚನೆಯಾಗಿದೆ. ಹೊಸದಾಗಿ ಗುರುತಿಸಿರುವ 519 ಕಂದಾಯ ಗ್ರಾಮಗಳ ಪೈಕಿ 2ಇ ತಿದ್ದುಪಡಿ ಅಧಿಸೂಚನೆ ಅನ್ವಯ ಖಾಸಗಿ ಜಮೀನಿನಲ್ಲಿರುವ ಜನವಸತಿ ಪ್ರದೇಶಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದರು. ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್, ರಘೋತ್ತಮ್‌ರಾವ್, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್‌ವಾಡ್ ಹಾಜರಿದ್ದರು.

ಬ್ಯಾಗ್ ಹಿಡ್ಕೊಂಡು ಮನೆಗೆ ಬಾ ಅನ್ನೋದಿಲ್ಲ! : ನಾನು ನಿಮಗೆ ಫೋನ್ ಮಾಡಿ ಮನೆಗೆ ಕರೆಯೊಲ್ಲ. ಬ್ಯಾಗ್ ಹಿಡ್ಕೊಂಡು ಮನೆಗೆ ಬಾ ಅನ್ನೋದಿಲ್ಲ...ಹೀಗೆಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಪಾವಗಡ ತಾಲೂಕಿನ ನಿಡಗಲ್ ರಸ್ತೆ ಕಾಮಗಾರಿ ಸರಿಯಾಗಿ ಮಾಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಕಾಮಗಾರಿ ವೀಕ್ಷಣೆ ಬಳಿಕ ರಿಪೋರ್ಟ್ ಮಾಡಿಲ್ಲ. ನೀನು ನನಗೆ ಕೆಲಸ ಹೇಳ್ಕೊಡಬೇಡ, ನಾನು ಹೇಳ್ತಾ ಇರೋ ಕೆಲಸ ನಿಂದು ಅಲ್ಲವೆಂದು ಡಿಸಿ, ಸಿಇಒ ಹೇಳಲಿ. ಆಗ ನಾನು ಏನೂ ಮಾತಾಡಲ್ಲ. ನಿಮಗೆಲ್ಲಾ ಸರಿಯಾಗಿ ಕೆಲಸ ಮಾಡುವ ಅಭ್ಯಾಸವಿಲ್ಲ. ಬೇಕಾಬಿಟ್ಟಿ ಕೆಲಸ ಮಾಡುತ್ತೀರಾ ಎಂದು ದಿಶಾ ಸಮಿತಿ ಸಭೆಯಲ್ಲಿ ಗರಂ ಆದರು.

ನೀವೇ ಚೀಫ್ ಆಗಿಬಿಟ್ಟರೆ .... : ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ರಸ್ತೆ 6 ತಿಂಗಳಲ್ಲಿ ಇರಲ್ಲ. ಜನಪ್ರತಿನಿಧಿಗಳಿಗೆ ಮಾಹಿತಿ ಕೊಡಲ್ಲ ಅಂದರೆ ನಾವು ಏಕೆ ಇರಬೇಕು. ಅಧಿಕಾರಿಗಳೇ ಸುಪ್ರಿಂ...ನೀವೇ ಚೀಫ್ ಆಗಿಬಿಟ್ಟರೆ ಹೇಗೆ. ಈ ಅಧಿಕಾರಿಗಳು ಯಾರೂ ಕಂಟ್ರೋಲ್ಗೆ ಸಿಗ್ತಾ ಇಲ್ಲ. ನಾವೆಲ್ಲ ತಪ್ಪು ಮಾಡಿದ್ರೆ ನಮಗೆ ಕೇಳೋರು ಇಲ್ಲ ಎಂಬ ಮನೋಭಾವ ಅಧಿಕಾರಿಗಳಿಗೆ ಬಂದಿದೆ. ಸರ್ಕಾರ ಕೇವಲ ಬಿಲ್ ಪೇಮೆಂಟ್ ಮಾಡೋಕೆ ಮಾತ್ರ ಇದೆ ಅನ್ನೋ ಮನೋಭಾವ ಅಧಿಕಾರಿಗಳದ್ದು. ಕಂಟ್ರಾಕ್ಟರ್‌ಗೆ ಬಿಲ್ ಪೇಮೆಂಟ್ ಮಾಡಿ ಕಳಿಸೋದು ಅಷ್ಟೇ. ಎಂಎಲ್‌ಎ, ಎಂಪಿನಾ ಕರೆಯುವುದನ್ನು ಕಲಿತುಕೊಳ್ಳಿ ಎಂದು ನಾರಾಯಣಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net