

ಕಾರವಾರ:ಹಿಂದು ದೇವತೆಗಳ ಬಗ್ಗೆ ಅಶ್ಲೀಲವಾಗಿ, ತುಚ್ಛವಾಗಿ ಮಾತನಾಡಿದ ದಲಿತ ಸಂಘಟನೆಯ ಮುಖಂಡನ ವಿರುದ್ಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ವಿರುದ್ಧ ಅವರದೇ ಸಂಘಟನೆಯ ಹಾಗೂ ಶಿರವಾಡ ಗ್ರಾಮದ 25 ಕ್ಕೂ ಹೆಚ್ಚು ನಾಗರಿಕರು ಗುರುವಾರ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಾತ್ರವಲ್ಲ ಅವರು ಮಾತನಾಡಿದ ವಿಡಿಯೋಗಳನ್ನು ಒಪ್ಪಿಸಿದ್ದರು. ಅದರಲ್ಲಿ ಎಲಿಷಾ ಎಲಕಪಾಟಿ ಕಾರಿನಲ್ಲಿ ಹೋಗುವಾದ ಹಿಂದು ದೇವತೆಗಳಾದ ಈಶ್ವರ, ಪಾರ್ವತಿ, ಗಣಪತಿ, ವಿಷ್ಣು ಹೀಗೆ ಎಲ್ಲರ ಬಗ್ಗೆ ಅವಾಚ್ಯವಾಗಿ, ಅಶ್ಲೀಲವಾಗಿ ಮಾತನಾಡಿರುವುದು ಕಂಡುಬರುತ್ತದೆ.
ಅವರ ವಿರುದ್ಧ ಕ್ರಮ ವಹಿಸಬೇಕು. ಗಡಿಪಾರು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಎಲಿಷಾ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದು, ಧರ್ಮ ಪ್ರಚಾರದಲ್ಲಿ ತೊಡಗಿದ್ದಾರೆ.
ಆದರೆ, ಪರಿಶಿಷ್ಟ ಜಾತಿಗೆ ಸೇರಿದವ ಎಂದು ಆ ಪ್ರಯೋಜನ ಪಡೆಯುತ್ತಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಎರಡು ವಿವಾಹವಾಗಿದ್ದಾರೆ. ಸುಳ್ಳು ಜಾತಿ ಪ್ರಮಾಣಪತ್ರ ಪಡೆದು, ಈ ಬಗ್ಗೆ ತನಿಖೆ ಮಾಡಬೇಕು ಎಂದು ಇನ್ನೂ ಹಲವು ಆರೋಪ ಮಾಡಿದ್ದಾರೆ.
ಕ್ಷಮೆ:
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಎಲಿಷಾ ಎಲಕಪಾಟಿ, ನಾನು ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಮಾಡಿ ಎಂದು ಕ್ಷಮೆ ಕೋರಿದ್ದಾರೆ.