

ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಒಕ್ಕೋರಲಿನಿಂದ ಆಗ್ರಹಿಸಿದ್ದಾರೆ.
ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ್ದಾರೆ. ದೇಶಕ್ಕಾಗಿ ತ್ಯಾಗ-ಬಲಿದಾನಗೈದ ನಾಯಕ. ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆಯಾಗಿಟ್ಟ ವೀರ. ಇಂಥ ದೇಶಪ್ರೇಮಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮತ್ತು ಹಿಂದು-ಮುಸ್ಲಿಂ ಗಲಭೆ ಸೃಷ್ಠಿಸುವ ನಿಟ್ಟಿನಲ್ಲಿ ಪ್ರಚೋದನಕಾರಿಯಾಗಿ ಮಾತುಗಳನ್ನಾಡಿದ ಯತ್ನಾಳ ಮೇಲೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಅವಾಚ್ಯವಾಗಿ ಮಾತನಾಡುತ್ತಾ, ಯತ್ನಾಳರ ಭಾಷೆ ತಮಗೂ ಬರುತ್ತದೆ. ಇನ್ಮುಂದೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡುತ್ತೇವೆ. ಮಾತೆತ್ತಿದರೆ ಪಾಕಿಸ್ತಾನದ ಹೆಸರು ತೆಗೆಯುವ ಯತ್ನಾಳರೇ ಪಾಕಿಸ್ತಾನ ಪ್ರೇಮಿಯಾಗಿದ್ದು ಕೂಡಲೇ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸುವುದು ಒಳ್ಳೆಯದು. ಈ ಪುಣ್ಯಾತ್ಮನಿಗೆ ಮತ ಹಾಕಿದ ಮತದಾರರಲ್ಲಿ ನನ್ನ ವಿನಂತಿ ಇಷ್ಟೆ-ದಯವಿಟ್ಟು ಬಡಮಕ್ಕಳನ್ನು ಕೋಮು ದಳ್ಳುರಿಗೆ ತಳ್ಳುವುದನ್ನು ನಿಲ್ಲಿಸಲು ಸಲಹೆ ನೀಡಿ. ಬಡ ಮಕ್ಕಳನ್ನು ಬಾವಿಗೆ ತಳ್ಳಿ ಮೋಜು ನೋಡುವ ಧೋರಣೆಗೆ ಕಡಿವಾಣ ಹಾಕಿ ಎಂದರು.
ಯತ್ನಾಳರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ. ಇನ್ಮುಂದೆ ಅವರ ಎಲ್ಲ ಟೀಕೆಗಳನ್ನು ಫೇಸ್ ಮಾಡುತ್ತೇವೆ ಮತ್ತು ಕೇಸ್ ದಾಖಲಿಸುತ್ತೇವೆ. ತಾಳ್ಮೆ ಕಳೆದುಕೊಂಡಿದ್ದು, ಇನ್ನೇನಿದ್ದರೂ ಏಟಿಗೆ ಎದಿರೇಟು ಎಂದರು.
ಮುಖಂಡ ಅಬ್ದುಲ್‌ರಜಾಕ್ ಹೊರ್ತಿ ಮಾತನಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಾಳ ಹಿಂದು- ಮುಸ್ಲಿಂ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿರುವ ಟಿಪ್ಪು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಯತ್ನಾಳರ ಕುಟುಂಬ ನಾಯಿಯೂ ಈ ದೇಶಕ್ಕಾಗಿ ತ್ಯಾಗ-ಬಲಿದಾನಗೈದಿಲ್ಲ. ಬಡ ಮಕ್ಕಳನ್ನು ಹಿಂದು- ಮುಸ್ಲಿಂ ಗಲಭೆಗೆ ಪ್ರಚೋದಿಸುವ ಯತ್ನಾಳ ತನ್ನ ಪುತ್ರನನ್ನು ಎಂಎಲ್ಎ ಮಾಡಲು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಬಡವರ ಮಕ್ಕಳ ಕೈಗೆ ಚಾಕು- ಚೂರಿ ಕೊಡಲು ಹೊರಟಿದ್ದಾರೆ. ಬಡ ಮಕ್ಕಳ ಕಲಿಕೆಗೆ ಸಹಾಯ ಮಾಡಿ. ಪೆನ್ನು, ಪೆನ್ಸಿಲ್, ನೋಟ್‌ಬುಕ್, ಕಂಪ್ಯೂಟರ್‌ಕೊಡಬೇಕಾದ ಶಾಸಕ ಬಿಟ್ಟು ಹೊಡಿ ಬಡಿ ಕಡಿ ಸಂಸ್ಕೃತಿ ಕಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಹಿಂದು ಧರ್ಮದ ಬಗ್ಗೆ ಮಾತನಾಡುವ ಯತ್ನಾಳ ಆ ಧರ್ಮದಲ್ಲಿರುವ ಜಾತಿ ತಾರತಮ್ಯದ ಬಗ್ಗೆಯೂ ಮಾತನಾಡಲಿ. ಮೇಲು- ಕೀಳು ಎಂಬ ಅಸಮಾನತೆ ಸೃಷ್ಠಿರುವ ಬಗ್ಗೆ ಮಾತನಾಡಲಿ ಎಂದರು.
ಮಂದಿ ಮಕ್ಕಳನ್ನು ಗಲಭೆಗೆ ಬಳಸಿಕೊಳ್ಳುವ ಯತ್ನಾಳರು ತಮ್ಮ ಪುತ್ರನಿಗೇಕೆ ಬಳಸಿಕೊಳ್ಳುವುದಿಲ್ಲ? ಈ ಹಿಂದೆ ಕಾರ್ಗಿಲ್ ವಿಜಯೋತ್ಸವ ಸಂದರ್ಭ ತಮ್ಮ ಪುತ್ರನನ್ನು ಸೇನೆಗೆ ಕಳುಹಿಸುವುದಾಗಿ ಹೇಳಿದ್ದೀರಲ್ಲ ಕಳುಹಿಸಿದಿರಾ? ನಿಮ್ಮ ಡೋಂಗಿತನ ಬಿಡಿ ಎಂದರು.
ಮುಖಂಡ ಡಾ. ಗಂಗಾಧರ ಸಂಬಣ್ಣಿ, ರಾಜಕೀಯಕ್ಕಾಗಿ, ವೈಯಕ್ತಿಕ ಹಿತಾಸಕ್ತಿ ಹಾಗೂ ಸ್ವಾರ್ಥಕ್ಕಾಗಿ ಮನಸೋ ಇಚ್ಛೆ ಮಾತನಾಡುವುದನ್ನು ಬಿಡಿ. ಕೈ ಮುಗಿದು ಕೇಳುತ್ತೇವೆ. ಸಮಾಜದಲ್ಲಿ ಒಡಕು ಮೂಡುವುದನ್ನು ನಿಲ್ಲಿಸಿ, ವಿಷ ಬೀಜ ಬಿತ್ತಬೇಡಿ ಎಂದರು.
ಎಂ.ಸಿ. ಮುಲ್ಲಾ ಮಾತನಾಡಿ, ಯತ್ನಾಳ ಹುಲಿಯಲ್ಲ ನಾಯಿ ಎಂಬುದು ಇದೀಗ ಅವರದ್ದೇ ಮಾತುಗಳಿಂದ ಗೊತ್ತಾಗಿದೆ. ತಾವೊಬ್ಬ ನಾಯಿ ಎಂದು ಬಾಗಲಕೋಟೆ ಜಿಲ್ಲೆಯಲ್ಲಿ ಹೇಳಿಕೊಂಡಿದ್ದಾರೆ. ಇನ್ಮುಂದೆ ಹುಲಿ ಎಂಬ ಸಂಬೋಧನೆ ಬಿಡಿ ಎಂದರು.
ದಿನೇಶ ಗುಂಡುರಾವ್ ಪ್ರಕರಣದಲ್ಲಿ ಹೈಕೋರ್ಟ್ ಛೀಮಾರಿ ಹಾಕಿದರೂ ಯತ್ನಾಳರಿಗೆ ಬುದ್ಧಿ ಬಂದಿಲ್ಲ. ಈ ಮನುಷ್ಯ ಕೋಮು ಗಲಭೆ ಸೃಷ್ಠಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸ್ವಭಾವದವನು. ಈ ಹಿಂದೆ ನಗರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದರ ಹಿಂದೆ ಈತನ ಕೈವಾಡ ಇತ್ತು. ಪಾಕಿಸ್ತಾನ ಎಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಇವರನ್ನು ಪಾಕಿಸ್ತಾನಕ್ಕೆ ಕಳುಹಿಸಲು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಕಿಡಿಕಾರಿದರು.
ಉಪ ಮೇಯರ್ ದಿನೇಶ ಹಳ್ಳಿ ಹಾಗೂ ಫಯಾಜ್ ಕಲಾದಗಿ ಮಾತನಾಡಿ, ಶಾಸಕ ಯತ್ನಾಳ ನಡೆ ಖಂಡಿಸಿದರು.