

ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಗೆ ಅವಹೇಳನಕಾರಿ ಕಮೆಂಟ್ ಮಾಡಿದ್ದ ಆರೋಪ ಸಂಬಂಧ ದಾಖಲಾಗಿರುವ ಪ್ರಕರಣದ ವಿಚಾರಣೆಗಾಗಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಬುಧವಾರ ರಾತ್ರಿ ವಿನೋಬನಗರ ಠಾಣೆಗೆ ಹಾಜರಾದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಅವರೊಂದಿಗೆ ಚಕ್ರವರ್ತಿ ಸೂಲಿಬೆಲೆ ವಿನೋಬನಗರ ಪೊಲೀಸ್ ಠಾಣೆಗೆ ಹಾಜರಾಗಿ ಕಾಂಗ್ರೆಸ್ ಕಾರ್ಯಕರ್ತೆ ಸೌಗಂಧಿಕ ದಾಖಲಿಸಿರುವ ದೂರಿನ ಸಂಬಂಧ ಹೇಳಿಕೆ ನೀಡಿದರು.
ಠಾಣೆಗೆ ತೆರಳಿದ ಚಕ್ರವರ್ತಿ ಸೂಲಿಬೆಲೆ ಅವರೊಂದಿಗೆ ವಿವಿಧ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಗಮಿಸಿದ್ದರು. ಠಾಣೆ ಹೊರಗೆ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಳ್ಳು ದೂರು ದಾಖಲು ಮಾಡಿರುವುದಾಗಿ ಆರೋಪಿಸಿ ಘೋಷಣೆ ಕೂಗಿದರು.
ಬಳಿಕ ಮಾಧ್ಯಮಗಳ ಜತೆ ಮಾತಾಡಿದ ಚಕ್ರವರ್ತಿ ಸೂಲಿಬೆಲೆ, ಇಂತಹ ಬೆದರಿಕೆಗಳಿಗೆ ಜಗ್ಗುವುದು ಇಲ್ಲ. ಬಗ್ಗುವುದು ಇಲ್ಲ. ಇದು ದೂರು ದಾಖಲಿಸಿಕೊಳ್ಳುವ ಸಂಗತಿಯೇ ಅಲ್ಲ. ಪ್ರಿಯಾಂಕ್ ಖರ್ಗೆ ಅವರು ಠಾಣೆ ಮೆಟ್ಟಿಲು ಹತ್ತಿಸುತ್ತೇನೆ ಎಂದಿದ್ದರು. ಸುಳ್ಳು ದೂರು ಕೊಡಿಸಿ ಠಾಣೆ ಮೆಟ್ಟಿಲು ಹತ್ತಿಸಿದ್ದಾರೆ. ದೂರಿಗೆ ನನ್ನ ಹೇಳಿಕೆಯನ್ನು ದಾಖಲಿಸಿದ್ದೇನೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಚಕ್ರವರ್ತಿ ಸೂಲಿಬೆಲೆ ಅವರಿಗೆ ನೊಟೀಸ್ ಜಾರಿ ಮಾಡಿದ್ದರು. ಈ ಹಿನ್ನೆಲೆ ಠಾಣೆಗೆ ಭೇಟಿ ನೀಡಿ ಹೇಳಿಕೆ ನೀಡಿದ್ದಾರೆ. ಇದರಿಂದ ರಾಷ್ಟ್ರಭಕ್ತ ಚಕ್ರವರ್ತಿ ಸೂಲಿಬೆಲೆ ಅವರಿಗೆ ಯಾವುದೇ ಅಪಮಾನವಾಗಿಲ್ಲ. ಅದರೆ ರಾಜ್ಯ ಸರ್ಕಾರಕ್ಕೆ ಅಪಮಾನವಾಗಿದೆ. ಉರಿ ಎಂಬ ಪದವನ್ನು ಇಷ್ಟು ದೊಡ್ಡ ವಿಷಯ ಮಾಡಿಕೊಂಡಿದ್ದಾರೆ. ಕಾಂಗ್ರೆಸಿಗರು ಉರ್ಕೊಳ್ಳೋದು ಬೇಡ. ಇದು ಆಡು ಭಾಷೆ ಎಂದು ಹೇಳಿದರು.