ಅಧಿಕಾರಿಗಳ ಕರ್ತವ್ಯ ಲೋಪ ಸಹಿಸುವುದಿಲ್ಲ: ಶಾಸಕ ಬಸವರಾಜ ಶಿವಣ್ಣನವರ ಖಡಕ್ ಎಚ್ಚರಿಕೆ

MLA Basavaraj meeting
Published on

ಬ್ಯಾಡಗಿ: ಜನರಿಗೆ ಸರ್ಕಾರದ ಯೋಜನೆ ತಲುಪಿಸಲು ಹಾಗೂ ಸಮರ್ಪಕ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಒತ್ತು ನೀಡಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಕೆ ನೀಡಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ತಹಸೀಲ್ದಾರ್ ಕಚೇರಿಗೆ ಸಣ್ಣಪುಟ್ಟ ಸೌಲಭ್ಯಕ್ಕಾಗಿ ಸಾರ್ವಜನಿಕರು ವರ್ಷಗಟ್ಟಲೆ ಓಡಾಡುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿಯಿಂದ ಜನರು ತೀವ್ರ ಬೇಸತ್ತಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡದಂತೆ ಸಿಬ್ಬಂದಿಗೆ ತಹಸೀಲ್ದಾರ್ ಸೂಚಿಸಬೇಕು. ಕೂಡಲೇ ವ್ಯವಸ್ಥೆ ಸರಿಪಡಿಸಿ, ಜನರಿಗೆ ನ್ಯಾಯ ಒದಗಿಸಬೇಕು. ತಾಲೂಕು ಆಡಳಿತ ಸುಸೂತ್ರವಾಗಿ ನಡೆಯಬೇಕು. ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.

ಯುಜಿಡಿ ಕಾಮಗಾರಿ ಕಳಪೆ:

ಬ್ಯಾಡಗಿ ಮಲ್ಲೇಶ್ವರ ಬೆಟ್ಟದಲ್ಲಿ ನಿರ್ವಿುಸಿದ ಚರಂಡಿ, ರಸ್ತೆಗಳು ಗುಣಮಟ್ಟದಿಂದ ಕೂಡಿಲ್ಲ. ನಾನೇ ಖುದ್ದಾಗಿ ವೀಕ್ಷಿಸಿದ್ದೇನೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಪ್ರಯೋಜನವಾಗಿಲ್ಲ. ಇಂತಹ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಯುಜಿಡಿ ಇಂಜಿನಿಯರ್ ಕೆ. ರುದ್ರಪ್ಪ ವಿರುದ್ಧ ಶಾಸಕರು ಹರಿಹಾಯ್ದರು.

ಬುಡಪನಹಳ್ಳಿ, ಆಣೂರು ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪೈಪ್​ಲೈನ್ ಮೇಲ್ಭಾಗದಲ್ಲಿ ಕಾಣಿಸುತ್ತಿದ್ದು, ಕೂಡಲೇ ಸರಿಪಡಿಸಬೇಕು. ಗ್ರಾಮೀಣ ಪ್ರದೇಶದ ವಿವಿಧ ಗ್ರಾಮಗಳಲ್ಲಿ ಸಿ.ಡಿ., ಚರಂಡಿ ಕಾಮಗಾರಿಯಲ್ಲಿ ಗುಣಮಟ್ಟದ ಕೊರತೆಯಿದ್ದು, ಸರಿಪಡಿಸಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ತೀವ್ರ ತೊಂದರೆಯಿದ್ದಲ್ಲಿ ರೈತರಿಂದ ಬಾಡಿಗೆ ಆಧಾರದಲ್ಲಿ ಕೊಳವೆ ಬಾವಿ ಪಡೆಯಬೇಕು. ಇ- ಸ್ವತ್ತು ದಾಖಲೆ ನೀಡಲು ಜನರನ್ನು ಆರು ತಿಂಗಳುಗಟ್ಟಲೇ ಓಡಾಡಿಸಿ, ತೊಂದರೆ ನೀಡುತ್ತಿರುವ ದೂರು ಕೇಳಿಬಂದಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು. ನೌಕರರ ಕರ್ತವ್ಯಲೋಪವನ್ನು ಸಹಿಸುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಸೇವೆ ಸಲ್ಲಿಸಿ. ಯಾರೂ ನನ್ನ ಬಳಿ ದೂರು ತರಬಾರದು ಎಂದು ಪಿಡಿಒಗಳಿಗೆ ಶಾಸಕ ಬಸವರಾಜ ಶಿವಣ್ಣನವರ ಖಡಕ್ಕಾಗಿ ಸೂಚನೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ಎಸ್.ವಿ. ಪ್ರಸಾದ, ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಸಿಪಿಐ, ಬಸವರಾಜ ಪಿ.ಎಸ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net