ಎಚ್.ಡಿ. ಕೋಟೆ : ಚುನಾವಣೆಗೆ ಚುನಾವಣಾಧಿಕಾರಿ ಗೈರು ಹಾಜರಾಗಿದ್ದರಿಂದ ನಿರ್ದೇಶಕರಿಗೆ ಅನ್ಯಾಯವಾಗಿದೆ. ಆದ್ದರಿಂದ ಚುನಾವಣಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಜೆಡಿಎಸ್ ಬೆಂಬಲಿತ ನೂತನ ನಿರ್ದೇಶಕ ಶಿವರಾಜು ಎಚ್ಚರಿಸಿದರು.
ನ.4 ರಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಿಗದಿ ಮಾಡಲಾಗಿತ್ತು. ಇದಕ್ಕೂ ಮುನ್ನ ನಡೆದಿದ್ದ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಶಿವರಾಜು ಬಣದಿಂದ 9 ಮತ್ತು ದಶರಥ ಬೆಂಬಲಿತ 3 ಜನ ಜಯ ಗಳಿಸಿದ್ದರು. ಚುನಾವಣಾ ಅಧಿಕಾರಿಯಾಗಿರುವ ರೇಣುಕಾ ಅವರು ಎಲ್ಲ ನಿರ್ದೇಶಕರಿಗೂ ನೋಟಿಸ್ ನೀಡಿ ಚುನಾವಣಾ ದಿನಾಂಕವನ್ನು ನಿಗದಿ ಮಾಡಿದ್ದರು. ಅದರಂತೆ ಎಲ್ಲ ಸದಸ್ಯರು ಚುನಾವಣೆಗೆ ಸಿದ್ಧತೆ ನಡೆಸಿಕೊಂಡು ಆಗಮಿಸಿದ್ದರು.
ಆದರೆ ಚುನಾವಣಾ ಅಧಿಕಾರಿ ರೇಣುಕಾ ಯಾವುದೇ ಮಾಹಿತಿ ನೀಡದೆ ಚುನಾವಣೆಗೆ ಆಗಮಿಸದೆ ಕರ್ತವ್ಯ ಲೋಪವೆಸಗಿದ್ದಾರೆ. ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕರ್ತವ್ಯ ಲೋಪ ಎಸಗಿದ್ದು, ಇವರನ್ನು ಕರ್ತವ್ಯದಿಂದ ಅಮಾನತು ಮಾಡಬೇಕೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮೈಸೂರು ಮತ್ತು ಚಾಮರಾಜನಗರ ಕೇಂದ್ರ ಬ್ಯಾಂಕ್‌ಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಬೆಂಬಲಿಸಿದ್ದ ದಶರಥ ಬಣದವರನ್ನು ಅಧ್ಯಕ್ಷರನ್ನಾಗಿ ಮಾಡಲು ಶಾಸಕ ಅನಿಲ್ ಚಿಕ್ಕಮಾದು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು, ತಮ್ಮ ಪ್ರಭಾವದಿಂದ ಚುನಾವಣಾಧಿಕಾರಿ ಚುನಾವಣೆಗೆ ಬಾರದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ರಾಜೇಂದ್ರ ಮಾತನಾಡಿ, ಜೆಡಿಎಸ್ ಪಕ್ಷ ಅಧಿಕಾರ ಹಿಡಿಯುವುದನ್ನು ಸಹಿಸಲಾರದೆ ದುರುದ್ದೇಶದಿಂದ ಚುನಾವಣೆ ನಡೆಸಿಲ್ಲ. ಚುನಾವಣಾ ಅಧಿಕಾರಿ ರೇಣುಕಾ ಅವರನ್ನು ಅಮಾನತುಗೊಳಿಸಬೇಕು, ಅವರಿಗೆ ಕುಮ್ಮಕ್ಕು ನೀಡಿರುವ ರಾಜಕೀಯ ವ್ಯಕ್ತಿಗಳ ಮೇಲೆ ತನಿಖೆ ನಡೆಸಬೇಕು, ಇನ್ನು ಒಂದು ವಾರದಲ್ಲಿ ಚುನಾವಣೆ ನಡೆಸಬೇಕು, ಇಲ್ಲವಾದಲ್ಲಿ ತಾಲೂಕಿನಾದ್ಯತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ನರಸಿಂಹೇಗೌಡ, ನಾಗರಾಜು, ಬೀರಪ್ಪ, ದೇವನಾಯಕ, ಶಿವಯ್ಯ, ಪ್ರಕಾಶ್, ರಂಗೇಗೌಡ, ಪ್ರದೀಪ್ ಇದ್ದರು.